Advertisement

ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ.. ಆಟ ಈಗ ಆರಂಭ..!: ಎಚ್ ಡಿಕೆ

04:54 PM Dec 08, 2021 | Team Udayavani |

ಬೆಂಗಳೂರು: ಸುಳ್ಳು ಸ್ಲೋಗನ್‌ʼಗಳ ಸೃಷ್ಟಿಕರ್ತ, ಟರ್ಮಿನೇಟರ್‌, ಸಿದ್ದಕಲೆಯ ನಿಪುಣಾಗ್ರೇಸರು ಈಗ ʼJDFʼ ಎಂಬ ಹೊಸ ಜಪ ಮಾಡಿಕೊಂಡು ತಮ್ಮ ಜಾತ್ಯತೀತ ತತ್ವಾದರ್ಶಗಳಿಗೆ ಮಂಡ್ಯದಲ್ಲಿ ಎಳ್ಳೂನೀರು ಬಿಟ್ಟಿದ್ದಾರೆ. ಸಹಕಾರ ಸಚಿವರ ಸಹಾಯಕನನ್ನು ಗೆಲ್ಲಿಸಿಕೊಳ್ಳಲು ʼಜಾತಿ ಸಹಕಾರʼಕ್ಕೆ ಮೊರೆ ಹೋಗಿದ್ದಾರೆ!! ಅಯ್ಯೋ, ಎಂಥಾ ದುರ್ವಿಧಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

Advertisement

ಸರಣಿ ಟ್ವೀಟ್ ಮಾಡಿರುವ ಎಚ್ ಡಿಕೆ, ಮತಫಸಲಿಗಾಗಿ ಜಾತಿ ರಾಜಕೀಯ ಮಾಡುತ್ತಿರುವ ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ. ಸಮುದಾಯದ ಅಧ್ಯಕ್ಷರೊಬ್ಬರು, ನೀವು ಮತ ಹಾಕುವುದು ಕಾಂಗ್ರೆಸ್‌ ಪಕ್ಷಕ್ಕಲ್ಲ, ನಮ್ಮ ಸಮುದಾಯದ ಸಿದ್ದಕಲಾಕೋವಿದನಿಗೆ ಎಂದು ಮನೆಮನೆಗೂ ಹೋಗಿ ಪ್ರಚಾರ ಮಾಡುತ್ತಿರುವುದು ಮಂಡ್ಯದಲ್ಲಿ ಮಜಬೂತಾಗಿ ನಡೆಯುತ್ತಿದೆ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದಿದ್ದಾರೆ.

ಅವರಿಗೆ ಜೆಡಿಎಸ್‌ ಫೋಬಿಯಾ ಕಾಡುತ್ತಿದೆ. ಚುನಾವಣೆ ಬಂದರೆ ಜೆಡಿಎಸ್‌ ಚಳಿ-ಜ್ವರ ಹತ್ತುತ್ತದೆ. ಈ ಜ್ವರ ಬಿಡಿಸಿಕೊಳ್ಳಲು ಸಿದ್ದಸೂತ್ರದಾರ ಬಳಸುವ ಹೊಸ ಔಷಧವೇ ʼJDFʼ. ಅವರನ್ನು ಉಳಿಸುವ ಟಾನಿಕ್‌ʼನ ಹೆಸರೇ ಜೆಡಿಎಸ್‌ ಕುಟುಂಬ ರಾಜಕಾರಣ. ಹಾಗಾದರೆ, ಅವರದ್ದು #SCF (#ಸಿದ್ದಸೂತ್ರದಾರಕಾಂಗ್ರೆಸ್‌ಫ್ಯಾಮಿಲಿ) ಅಲ್ಲವೆ? ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:ರಾಜ್ಯಕ್ಕೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿ: ಸಿಎಂ ಬೊಮ್ಮಾಯಿ

ಜೆಡಿಎಸ್‌, ಬಿಜೆಪಿ ಬಿ ಟೀಂ ಎಂದು ಭಜನೆ ಮಾಡುವವರು, ಸಹಕಾರ ಸಚಿವರ ಸಹಾಯಕನನ್ನು ಅಭ್ಯರ್ಥಿ ಮಾಡಿದ್ದು ಯಾರಿಗೆ ಸಹಕಾರ ನೀಡಲಿಕ್ಕೆ? ಜಾತ್ಯತೀತತೆಯ ಮುಖವಾಡ ಹಾಕಿಕೊಂಡು ಬಿಜೆಪಿಯನ್ನು ಬೈಯ್ಯುವವರು ಅದೇ ಪಕ್ಷದ ಸಚಿವರ ಪಿಎಗೆ ಟಿಕೆಟ್‌ ಕೊಟ್ಟಿದ್ದರ ಒಳಲೆಕ್ಕ ಏನು? ಇದು ಯಾರ ಲೆಕ್ಕ ಚುಕ್ತಾ ಮಾಡಲಿಕ್ಕೆ? ಇದೆಂಥಾ ಒಳ ಒಪ್ಪಂದ ಎಂದು ಪ್ರಶ್ನಿಸಿದ್ದಾರೆ.

Advertisement

ಜಾತ್ಯತೀತತೆಯ ಜಗಜಟ್ಟಿ ಮೈಸೂರಿನಲ್ಲಿ ಮಾಡಿದ ಜಾತಿ ರಾಜಕಾರಣ ಗೊತ್ತಿದೆ. ʼಸಂದೇಶ ಸನ್ನಿಧಿʼಯಲ್ಲಿ ಕೂತು ಕಾಂಗ್ರೆಸ್‌ ಮತದಾರರ 2ನೇ ಪ್ರಾಶಸ್ತ್ಯದ ಮತಗಳು ಬಿಜೆಪಿಗೇ ಹೋಗಬೇಕು, ಜೆಡಿಎಸ್‌ʼಗಲ್ಲ ಎಂದು ಫರ್ಮಾನು ಹೊರಡಿಸಿದ ʼಚಾಮುಂಡೇಶ್ವರಿ ಕ್ಷೇತ್ರ ತಿರಸ್ಕೃತʼ ಸುಳ್ಳು ಸ್ಲೋಗನ್‌ʼಗಳ ಸೃಷ್ಟಿಕರ್ತನ ನಾಟಕದ ಪರದೆ ಜಾರಿಬಿದ್ದಿದೆ. ರಾಜಕೀಯ ಆರಂಭಿಸಿದ ಮಾತೃಪಕ್ಷವನ್ನೇ ಕ್ರೂರವಾಗಿ ಮುಳುಗಿಸಲು ಹೊರಟ ಆ ನಾಯಕರು, ಕೈ ಹಿಡಿದ ಸ್ವಪಕ್ಷವನ್ನೂ ಸ್ವಾಹಾ ಮಾಡುತ್ತಿದ್ದಾರೆ. ʼವಿನಾಶಕಾಲೇ ವಿಪರೀತ ಸುಳ್ಳು!ʼ. ಆ ಸುಳ್ಳುಗಳೇ ಅವರನ್ನು ಸುಡುತ್ತವೆ. ಆಟ ಈಗ ಆರಂಭ ಎಂದು ಎಚ್ ಡಿಕೆ ಟ್ವೀಟ್ ನಲ್ಲಿ ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next