ಮಂಡ್ಯ: ನಾವು ಹೊಂದಾಣಿಕೆ ಮಾಡಿಕೊಂಡಿದ್ದರೆ ಸರ್ಕಾರನೇ ಉರುಳಿಸಬಹುದಿತ್ತು. ಆದರೆ ನಾವು ಯಾವ ಸರ್ಕಾರದೊಂದಿಗೂ ಹೊಂದಾಣಿಕೆಗೆ ಕಾಯುತ್ತಿಲ್ಲ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 224 ಮಂದಿ ಶಾಸಕರೂ ಕೂಡ ಮುಖ್ಯಮಂತ್ರಿ ಜತೆಗೆ ಇದ್ದಾರೆ. ಹೀಗಾಗಿ ನಾವು ಯಾವ ಹೊಂದಾಣಿಕೆಗೂ ಕಾಯುತ್ತಿಲ್ಲ. ಅದರ ಅವಶ್ಯಕತೆ ನಮಗಿಲ್ಲ. ಯಾರೋ ಮಾತನಾಡುವವರಿಗೆ ನಾನು ಉತ್ತರ ಕೊಡಲ್ಲ ಎಂದು ಟಾಂಗ್ ನೀಡಿದರು.
ಮೇಕೆದಾಟು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಸಂಸತ್ ನಲ್ಲಿ ಏನು ಉತ್ತರ ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಆದರೆ ರಾಜ್ಯ ಸರ್ಕಾರ ನಾವು ಮಾಡಿಯೇ ಮಾಡುತ್ತೇವೆ ಅಂತಿದ್ದಾರೆ. ಆದರೆ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನು ಕಾದು ನೋಡಬೇಕು ಎಂದರು.
ಇದನ್ನೂ ಓದಿ:ಸಂತ್ರಸ್ತರಿಗೆ 15 ದಿನಗಳಲ್ಲಿ ಹಕ್ಕುಪತ್ರ ವಿತರಿಸಲು ಅಧಿಕಾರಿಗಳಿಗೆ ಸಚಿವ ಕಾರಜೋಳ ಸೂಚನೆ
ನೂತನ ಸಚಿವ ಸಂಪುಟದ ಖಾತೆ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಸರ್ಕಾರದ ಪೂರ್ಣಾವಧಿ ಬಗ್ಗೆ ನಾನು ಭವಿಷ್ಯ ನುಡಿಯಲ್ಲ. ನೂತನ ಸಿಎಂ ಪೂರ್ಣಾವಧಿ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಲಿ. ಅವರು ಸಿಎಂ ಆಗಿ ಮುಂದುವರಿಯುತ್ತಾರೋ, ಇಲ್ಲ ಮುಂದೆ ಬಿಜೆಪಿ ಪಕ್ಷದಲ್ಲೇ ಸಮಸ್ಯೆಗಳು ಎದುರಾಗುತ್ತದೋ ಗೊತ್ತಿಲ್ಲ ಎಂದು ಹೇಳಿದರು.
ನನ್ನ ಆತ್ಮೀಯ ಸ್ನೇಹಿತರು ಸಂಪೂರ್ಣ ಅವಧಿಯನ್ನು ಮುಗಿಸಬೇಕು ಎನ್ನುವುದು ನಮ್ಮೆಲ್ಲರ ಆಶಯ. ಜತೆಗೆ ನಾಡಿನ ಜನರ ಸಮಸ್ಯೆಗಳಿಗೆ ಈ ಸರ್ಕಾರದಲ್ಲಿ ಉತ್ತಮ ರೀತಿಯ ಕಾರ್ಯಕ್ರಮ ರೂಪಿಸಲಿ ಎಂದು ನೂತನ ಸಿಎಂಗೆ ಶುಭ ಹಾರೈಸುವ ಮೂಲಕ ಮುಂದೆ ಸಮಸ್ಯೆಗಳು ಬರಬಹುದು ಎಂಬ ಧಾಟಿಯಲ್ಲಿ ಹೇಳಿದರು.