Advertisement
ಹದಿ ನೈದು ದಿನಗಳೊಳಗೆ ಇದಕ್ಕಾಗಿ ಸ್ಪಷ್ಟ ಮಾರ್ಗಸೂಚಿ ಸಿದ್ಧ ಪಡಿಸಲಾಗುವುದು ಎಂದು ಹೇಳಿರುವ ಮುಖ್ಯ ಮಂತ್ರಿ, ಏಪ್ರಿಲ್ 1, 2009ರಿಂದ ಡಿಸೆಂಬರ್ 31, 2017ರವರೆಗೆ ಮಾಡಿರುವ ಬೆಳೆ ಸಾಲ ಮನ್ನಾ ವ್ಯಾಪ್ತಿಗೆ ಬರಲಿದೆ. ಆಯಾ ಜಿಲ್ಲಾಧಿಕಾರಿಗಳು ನೋಡಲ್ ಅಧಿಕಾರಿಗಳಾಗಿದ್ದು, ಸಣ್ಣ ಮತ್ತು ಅತಿಸಣ್ಣ ರೈತರು ತಾವು ಪಡೆದುಕೊಂಡಿರುವ ಸಾಲದ ವಿವರ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.
Related Articles
Advertisement
ಎರಡನೇ ಹಂತದಲ್ಲಿ ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಟ್ರ್ಯಾಕ್ಟರ್ ಖರೀದಿ, ಕೊಳವೆ ಬಾವಿ ಕೊರೆಸಲು ಸೇರಿದಂತೆ ಇತರೆ ಚಟುವಟಿಕೆಗಳಿಗೆ ಮಾಡಿರುವ ಸಾಲದ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
ಕೆಲವೆಡೆ ಮದುವೆಗೆ, ಚಿನ್ನಾಭರಣ ಮಾಡಿಸಿಕೊಳ್ಳಲು, ಕಾರು ಹಾಗೂ ದ್ವಿಚಕ್ರ ವಾಹನ ಖರೀದಿ, ಮನೆ ನಿರ್ಮಾಣಕ್ಕೂ ಸಾಲ ಪಡೆಯಲಾಗಿದೆ. ನೂರಾರು ಎಕರೆ ಜಮೀನು ಹೊಂದಿರುವ ದೊಡ್ಡ ರೈತರು ಕೋಟ್ಯಂತರ ರೂ. ಸಾಲ ಮಾಡಿದ್ದಾರೆ. ಅವೆಲ್ಲವೂ ಯಾವ ರೀತಿ ಪರಿಗಣಿಸಬೇಕು ಎಂಬ ಪ್ರಶ್ನೆಯೂ ಇದೆ. ಅವೆಲ್ಲವನ್ನೂ ಪರಿಶೀಲಿಸಲಾಗುವುದು ಎಂದು ಹೇಳಿದರು.
ನೂರಾರು ಎಕರೆ ಕಾಫಿ ಪ್ಲಾಂಟೇಷನ್, ಟೀ ಪ್ಲಾಂಟೇಷನ್, ಸಾವಿರಾರು ಎಕರೆ ಕೃಷಿ ಭೂಮಿ ಹೊಂದಿರುವ ರೈತರ ಸಾಲ ಮನ್ನಾ ಮಾಡಬೇಕೇ? ಸರ್ಕಾರಿ ನೌಕರಿಯಲ್ಲಿದ್ದುಕೊಂಡು ಸಾಲ ಪಡೆದವರು, ಕೃಷಿ ಹೆಸರಿನಲ್ಲಿ ಕೋಟ್ಯಂತರ ರೂ. ಸಾಲ ಪಡೆದು ಬೇರೆ ಬೇರೆ ವ್ಯಾಪಾರದಲ್ಲಿ ತೊಡಗಿರುವವರೂ ಇದ್ದು ಅವರಿಗೂ ಅನ್ವಯ ಮಾಡಬೇಕೇ? ಮತ್ತೆ ಕೆಲವರು ಸಹಕಾರ ಬ್ಯಾಂಕುಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಮೂರು ಲಕ್ಷ ರೂ. ಸಾಲ ಪಡೆದು ಅದನ್ನು ಬೇರೆ ಬ್ಯಾಂಕುಗಳಲ್ಲಿಟ್ಟು ಬಡ್ಡಿ ಪಡೆಯುತ್ತಿದ್ದಾರೆ ಅಂತವರಿಗೂ ಮನ್ನಾ ಮಾಡಬೇಕೇ? ಎಂದು ಸಭೆಯಲ್ಲಿದ್ದ ರೈತ ಪ್ರತಿನಿಧಿಗಳನ್ನು ಕೇಳಿದರ. ಆಗ, ಬೇಡ ಎಂಬ ಉತ್ತರ ಬಂದಿತು.
ನಮ್ಮದು ವಿರೋಧವಿಲ್ಲ:ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ರೈತರ ಸಾಲ ಮನ್ನಾ ಮಾಡಲು ನಮ್ಮ ಸಂಪೂರ್ಣ ಬೆಂಬಲವಿದೆ. ನಾವೆಂದೂ ವಿರೋಧ ವ್ಯಕ್ತಪಡಿಸಿಲ್ಲ. ಆ ರೀತಿಯ ಭಾವನೆ ಬೇಡ. ಆದರೆ, ಸಮ್ಮಿಶ್ರ ಸರ್ಕಾರ ಆದ್ದರಿಂದ ಸ್ವಲ್ಪ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಪಡೆದಿದ್ದ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದು ಯುಪಿಎ ಸರ್ಕಾರ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರೂ ಸಹ ರೈತರಪರವೇ ಇದ್ದಾರೆ. ಸಿದ್ದರಾಮಯ್ಯ ಆವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 50 ಸಾವಿರ ರೂ. ಸಾಲ ಮನ್ನಾ ಮಾಡಲು ರಾಹುಲ್‌ಗಾಂಧಿಯವರೇ ಸಲಹೆ ನೀಡಿದ್ದರು ಎಂದು ಹೇಳಿದರು. ಶಾಸಕರಾದ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶಂಪೂರ್, ಸಾ.ರಾ.ಮಹೇಶ್, ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು. ಕಾದು ನೋಡುತ್ತೇವೆ
sನಂತರ ಮಾತನಾಡಿದ ರೈತ ಸಂಘದ ಪ್ರತಿನಿಧಿಗಳು, ಮುಖ್ಯಮಂತ್ರಿಯವರು ಹದಿನೈದು ದಿನಗಳಲ್ಲಿ ಮಾರ್ಗಸೂಚಿ ಸಿದ್ಧಪಡಿಸಿ ಸಾಲಮನ್ನಾ ಮಾಡುವ ಭರವಸೆ ನೀಡಿದ್ದಾರೆ. ಸಭೆಯ ಮಾತುಕತೆ ನಮಗೆ ತೃಪ್ತಿ ತಂದಿದೆ. ಹದಿನೈದು ದಿನ ಕಾದು ನೋಡುತ್ತೇವೆ ಎಂದು ಹೇಳಿದರು. ಯಾರಿಗೆ ಅನ್ವಯ
ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ (ಕಾಫಿ, ದಾಳಿಂಬೆ, ಅಡಿಕೆ ಸೇರಿ) ಸಹಕಾರಿ ಸಂಘ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವು ಮನ್ನಾಗೆ ಅನ್ವಯವಾಗಲಿದೆ. ಎಷ್ಟಾಗಬಹುದು?
ರಾಜ್ಯದ ಸಹಕಾರ ಬ್ಯಾಂಕುಗಳಲ್ಲಿ 2017-18 ನೇ ಸಾಲಿನಲ್ಲಿ 24 ಲಕ್ಷ ರೈತರಿಗೆ 12 ಸಾವಿರ ರೂ. ಕೋಟಿ ರೂ. ಬೆಳೆ ಸಾಲ ನೀಡಲಾಗಿತ್ತು. ಈ ಪೈಕಿ 50 ಸಾವಿರ ರೂ. ಮನ್ನಾ ಯೋಜನೆಯಿಂದ 22.27 ಲಕ್ಷ ರೈತರ 8165 ಕೋಟಿ ರೂ. ಚುಕ್ತಾ ಆಗಿದೆ.ಉಳಿದಂತೆ ಸುಮಾರು ಎರಡೂವರೆ ಸಾವಿರ ಕೋಟಿ ರೂ. ಇದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಣ್ಣ ಮತ್ತು ಮಧ್ಯಮ ರೈತರು ಪಡೆದಿರುವ ಬೆಳೆಸಾಲದ ಮೊತ್ತದ ಸುಮಾರು 25ರಿಂದ 30 ಸಾವಿರ ಕೋಟಿ ರೂ. ಇರಬಹುದು ಎಂದು ಅಂದಾಜು ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಬಡ್ಡಿ ಮನ್ನಾಕ್ಕೆ ಒಪ್ಪಿದರೆ ಸರ್ಕಾರಕ್ಕೆ ಮತ್ತಷ್ಟು ಹೊರೆ ಕಡಿಮೆಯಾಗಬಹುದು ಎಂದು ಹೇಳಲಾಗಿದೆ. ಪುಣ್ಯಾತ್ಮ ರಾಹುಲ್‌ಗಾಂಧಿ
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರನ್ನು ಪುಣ್ಯಾತ್ಮ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಗಳಿದರು. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ 72 ಸಾವಿರ ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಿಸುವಲ್ಲಿ ಅವರ ಪಾತ್ರ ಇತ್ತು. ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ 50 ಸಾವಿರ ರೂ. ಮನ್ನಾ ಮಾಡುವುದು ಅವರ ನಿರ್ಧಾರ. ರೈತರ ಬಗ್ಗೆ ಅವರಿಗೆ ಇರುವ ಕಾಳಜಿಯಿಂದ ಇದು ಸಾಧ್ಯವಾಗಿದೆ. ರಾಜ್ಯದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟು ಆ ಪುಣ್ಯಾತ್ಮ ಬೆಂಬಲ ನೀಡಿದ್ದಾರೆ. ಹೀಗಾಗಿ, ಅವರ ನಂಬಿಕೆ ಉಳಿಸಿಕೊಂಡು ಸರ್ಕಾರವನ್ನೂ ಮುನ್ನಡೆಸಿ ಆರ್ಥಿಕ ಶಿಸ್ತಿನ ಇತಿಮಿತಿಯೊಳಗೆ ರೈತರ ಸಾಲ ಮನ್ನಾ, ನಗರ ಪ್ರದೇಶಗಳ ಅಭಿವೃದ್ಧಿ, ನೀರಾವರಿ ಯೋಜನೆಗಳಿಗೆ ಹಣ ಹೊಂದಿಸುವುದು ಎಲ್ಲವನ್ನೂ ಮಾಡಲಿದ್ದೇನೆ. ದಾಖಲೆ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರ ಸಲಹೆ-ಸೂಚನೆ ಸಹ ಪಡೆಯಲಿದ್ದೇನೆ ಎಂದು ಹೇಳಿದರು. 1.14 ಲಕ್ಷ ಕೋಟಿ ರೂ. ಮನ್ನಾ ಮಾಡಿ
ಸಹಕಾರಿ ಬ್ಯಾಂಕು, ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕ್, ಖಾಸಗಿ ಲೇವಾದೇವಿದಾರರ ಬಳಿ ಪಡೆದಿರುವ ಒಟ್ಟು ಸಾಲ 1.14 ಲಕ್ಷ ಕೋಟಿ ರೂ.ವರೆಗೆ ಇದೆ. ಆ ಎಲ್ಲ ಸಾಲ ಒಮ್ಮೆ ಮನ್ನಾ ಮಾಡಿ ಋಣಮುಕ್ತರನ್ನಾಗಿ ಮಾಡಿ. ಸಣ್ಣ ರೈತ, ದೊಡ್ಡ ರೈತ ಎಂಬ ತಾರತಮ್ಯ ಬೇಡ. ಸಂಪೂರ್ಣ ಸಾಲ ಮನ್ನಾ ಮಾಡಿ ಹೊಸ ಸಾಲ ಸಿಗುವಂತೆ ಮಾಡಿ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿದರೆ ರೈತರು ನೆಮ್ಮದಿಯಿಂದ ಬದುಕುವಂತಾಗುತ್ತದೆ ಎಂದು ಸಭೆಯಲ್ಲಿ ಮಾತನಾಡಿದ ಬಹುತೇಕ ರೈತ ಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಗದ್ದಲ-ಗೊಂದಲ ಸಿಎಂ ಗರಂ
ಸಭೆಯಲ್ಲಿ ಜಿಲ್ಲಾವಾರು ಒಬೊಬ್ಬ ಮುಖಂಡರಿಗೆ ಮಾತನಾಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ತಾವೂ ಮಾತನಾಡಬೇಕು ಎಂದು ಒಮ್ಮೆಲೆ ಎಲ್ಲರೂ ಎದ್ದ ಕಾರಣ ಸಭೆಯಲ್ಲಿ ಕೆಲಕಾಲ ಗದ್ದಲ, ಗೊಂದಲ ಉಂಟಾಗಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಕೋಪಗೊಂಡ ಕುಮಾರಸ್ವಾಮಿಯವರು, ನೀವು ಸಂತೇಲಿ ಕುಳಿತು ಮಾತನಾಡುತ್ತಿಲ್ಲ. ಹೀಗಾದರೆ ಹೇಗೆ? ನಿಮ್ಮಲ್ಲೇ ಗೊಂದಲ ಇದ್ದರೆ ಸರ್ಕಾರಕ್ಕೆ ಏನು ಸಲಹೆ ಕೊಡ್ತೀರಿ ಎಂದು ಖಾರವಾಗಿ ಪ್ರಶ್ನಿಸಿದರು. ಇದರ ಮಧ್ಯೆಯೂ ಉತ್ತರ ಕರ್ನಾಟಕ ಭಾಗದ ಪ್ರತಿನಿಧಿ ಎದ್ದು ನಿಂತು ಮಾತನಾಡಲು ಮುಂದಾದಾಗ, ಅವರನ್ನು ಹೊರಗೆ ಕಳುಹಿಸಿ ಎಂದು ಸೂಚನೆ ನೀಡಿದರು. ತಿಂಗಳಿಗೊಮ್ಮೆ ಸಭೆ
ಇನ್ಮುಂದೆ ರೈತ ಪ್ರತಿನಿಧಿಗಳ ಜತೆ ತಿಂಗಳಿಗೊಮ್ಮೆ ಸಭೆ ನಡೆಸಲಿದ್ದೇನೆ. ಸಾಲ ಮನ್ನಾ ಒಂದು ಭಾಗ. ಉಳಿದಂತೆ ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ, ಗೋದಾಮು ಹಾಗೂ ಕೋಲ್ಡ್ ಸ್ಟೋರೇಜ್ ನಿರ್ಮಾಣ, ಇಸ್ರೇಲ್ ಮಾದರಿ ಕೃಷಿ ಪದ್ಧತಿ, ಆಯಾ ಜಿಲ್ಲೆಯಲ್ಲಿ 20 ವರ್ಷದ ಮಳೆ ಪ್ರಮಾಣ ಆಧರಿಸಿ ಯಾವ ಬೆಳೆ ಬೆಳೆಯಬೇಕು ಎಂಬ ಬಗ್ಗೆ ಸರ್ಕಾರದಿಂದಲೇ ಸೂಚನೆ ನೀಡುವುದು ಸೇರಿದಂತೆ ರೈತರು ಆತ್ಮಹತ್ಯೆ ಹಾದಿ ಹಿಡಿಯದೆ ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಡುವುದು ನನ್ನ ಉದ್ದೇಶ. ಸಮ್ಮಿಶ್ರ ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಲಿದೆ. ನೀವು ಸಮಾಧಾನದಿಂದ ಇದನ್ನು ಬಳಸಿಕೊಳ್ಳಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದರು. ಕಾರಜೋಳ ವಿರುದ್ಧ ಗರಂ
ಬಿಜೆಪಿ ಪರವಾಗಿ ಸಭೆಗೆ ಆಗಮಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಗೋವಿಂದ ಕಾರಜೋಳ ಅವರು ಮಾತನಾಡಿ, ಜೆಡಿಎಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ 53 ಸಾವಿರ ಕೋಟಿರೂ. ಸಾಲ ಮನ್ನಾ ಮಾಡಬೇಕು. ಅದೇ ರೀತಿ ಬಾಗಲಕೋಟೆ, ವಿಜಾಪುರ ಜಿಲ್ಲೆಗಳಲ್ಲಿ ನೀರಾವರಿ ಯೋಜನೆಗಳ ಬಗ್ಗೆಯೂ ಗಮನಹರಿಸಬೇಕು ಎಂದು ಹೇಳಿದರು. ಆಗ ರೈತ ಪ್ರತಿನಿಧಿಗಳು, ಮೊದಲು ಸಾಲ ಮನ್ನಾಬಗ್ಗೆ ಮಾತನಾಡಿ, ಕೇಂದ್ರ ಸರ್ಕಾರ, ನಿಮ್ಮ ಪ್ರಧಾನಿ ಮೋದಿ ಎಷ್ಟು ಪಾಲು ಭರಿಸಲಿದ್ದಾರೆ ಹೇಳಿ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಗದ್ದಲ ಉಂಟಾಯಿತು. ಇದರಿಂದ ಕೋಪಗೋಂಡ ಕಾರಜೋಳ, ನನಗೂ ರಾಜಿಕೀಯ ಮಾತನಾಡಲು ಬರುತ್ತದೆ. ಆದರೆ, ಇಲ್ಲಿನ ಅಭಿಪ್ರಾಯ ಆಲಿಸಿದ್ದೇನೆ. ಯಾರಿಗೆ ಹೇಳಬೇಕೋ ಅವರಿಗೆ ತಲುಪಿಸಲಿದ್ದೇನೆ ಎಂದು ಹೇಳಿದರು. ಕೇಂದ್ರವೂ ಭರಿಸಲಿ
ರೈತರ ಸಾಲ ಮನ್ನಾ ಕೇವಲ ರಾಜ್ಯ ಸರ್ಕಾರದ ಹೊಣೆಗಾರಿಕೆಯಲ್ಲ. ಕೇಂದ್ರ ಸರ್ಕಾರವೂ ಪಾಲು ಭರಿಸಬೇಕು. ರಾಜ್ಯ ಸರ್ಕಾರ ತನ್ನ ಇತಿಮಿತಿಯಲ್ಲಿ ಕ್ರಮ ಕೈಗೊಳ್ಳಲು ಸಾಧ್ಯ. ಆದರೆ, ಕೇಂದ್ರ ಸರ್ಕಾರಕ್ಕೂ ಜವಾಬ್ದಾರಿಯಿದೆ ಎಂದು ಪ್ರಾಂತ ರೈತ ಸಂಘದ ಜಿ.ಸಿ.ಬಯ್ನಾರೆಡ್ಡಿ ಹೇಳಿದರು. ಸಂಸತ್‌ನಲ್ಲಿ ಮಂಡನೆಯಾಗಿರುವ ರೈತರನ್ನು ಋಣಮುಕ್ತರಾಗಿಸುವ ಖಾಸಗಿ ಮಸೂದೆ ಅಂಗೀಕಾರವಾಗಬೇಕಿದೆ. ಕೇರಳ ಮಾದರಿಯ ಪ್ಯಾಕೇಜ್ ಇಲ್ಲೋ ಕೊಡಬೇಕಿದೆ ಎಂದು ತಿಳಿಸಿದರು. ಸರ್ಕಾರ ಭದ್ರ
ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರಲಿದೆ. ಸರ್ಕಾರ ಎಷ್ಟು ದಿನ ಇರುತ್ತೋ ಎಂಬ ಅನುಮಾನ ಕೆಲವರಿಗೆ ಇರಬಹುದು. ನಾವೂ ರಾಜಕಾರಣದಲ್ಲಿ ಒಂದಷ್ಟು ಕಲಿತಿದ್ದೇವೆ. ಸರ್ಕಾರ ಐದು ವರ್ಷ ಸರಾಗವಾಗಿ ನಡೆಸುವುದು ಹೇಗೆ ಎಂಬುದು ಗೊತ್ತಿದೆ. ಯಾರು ಎಷ್ಟೇ ಪ್ರಯತ್ನ ಪಟ್ಟರೂ ಸರ್ಕಾರಕ್ಕೆ ಏನೂ ಆಗುವುದಿಲ್ಲ.
– ಎಚ್.ಡಿ.ಕುಮಾರಸ್ವಾಮಿ ರೈತರು ತಾವು ಬೆಳೆದ ಹಣ್ಣು-ತರಕಾರಿ, ದವಸ-ಧಾನ್ಯ ಸೇರಿ ಎಲ್ಲವನ್ನೂ ಸರ್ಕಾರಕ್ಕೆ ಕೊಡಲಿದ್ದಾರೆ. ಕೆಎಂಎಫ್ ಮಾದರಿಯಲ್ಲಿ ಸರ್ಕಾರವೇ ಖರೀದಿಸಿ ಸಾರ್ವಜನಿಕರಿಗೆ ಮಾರಾಟ ವ್ಯವಸ್ಥೆ ಮಾಡಲಿ. ಗೋದಾಮು ಹಾಗೂ ಕೋಲ್ಟ್ ಸ್ಟೋರೇಜ್‌ಗಳಲ್ಲಿ ದಾಸ್ತಾನು ಮಾಡಿ ಸೂಕ್ತ ಮಾರುಕಟ್ಟೆ ಕಲ್ಪಿಸಲಿ. ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಲಿ.
– ಸುನಂದಾ ಜಯರಾಂ ರೈತರು ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಷ್ಟೇ ಅಲ್ಲದೆ ಖಾಸಗಿ ಲೇವಾದೇವಿದಾರರಿಂದಲೂ ಸಾಲ ಪಡೆದಿದ್ದಾರೆ. ಚಿನ್ನ, ಮನೆ, ಹೊಲ ಅಡವಿಟ್ಟು ಪಡೆದಿದ್ದಾರೆ. ಈ ಎಲ್ಲದರ ಬಗ್ಗೆಯೂ ಸರ್ಕಾರ ಗಮನಹರಿಸಬೇಕು.
– ಮಾರುತಿ ಮಾನ್ಪಡೆ ರಾಜಕಾರಣಿಗಳು ಎಂದರೆ ಸುಳ್ಳು ಹೇಳುವವರು ಎಂಬಂತಾಗಿದೆ. ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಚುನಾವಣೆ ನಂತರ ಮರೆಯುತ್ತಾರೆ ಎಂಬ ಮಾತಿದೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು.
– ಬಸವರಾಜಪ್ಪ ರೈತರು ಸಾಲ ಮಾಡಿ ಅನುಭವಿಸುತ್ತಿರುವ ಕಷ್ಟ ಅವರಿಗೇ ಗೊತ್ತು. ರೈತರ ಸಾಲ ಮನ್ನಾ ಮಾಡಿದರೆ ಸರ್ಕಾರ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತದೆ ಎಂಬ ಮಾತುಗಳು ಸರಿಯಲ್ಲ. ದೇಶಕ್ಕೆ ಅನ್ನಕೊಡುವ ರೈತನ ಬದುಕು ಹಸನುಗೊಂಡರೆ ಜನರು ನೆಮ್ಮದಿಯಿಂದ ಇರುತ್ತಾರೆ.
– ಕುರುಬೂರು ಶಾಂತಕುಮಾರ್ ಹಣ ವಸೂಲಿ
ಸಭೆಯಲ್ಲಿ ರೈತ ಪ್ರತಿನಿಧಿಗಳು ಮಾತನಾಡುತ್ತಿದ್ದಾಗ ಚಿಕ್ಕಬಳ್ಳಾಪುರದ ರೈತ ಪ್ರತಿನಿಧಿ ನಾರಾಯಣಸ್ವಾಮಿ, ಸಾಲ ಮನ್ನಾ ಮಾಡಿಸುತ್ತೇವೆ ಎಂದ ಹೇಳಿ ರೈತರಿಂದ 100 ರಿಂದ 500 ರೂ. ಮುಖಂಡರು ಪಡೆದಿದ್ದಾರೆ. ಅದನ್ನೂ ವಾಪಸ್ ಕೊಡಿ ಎಂದು ಆಗ್ರಹಿಸಿದರು. ಇದರಿಂದ ವಿಚಲಿತರಾದ ಕೆಲವು ಮುಖಂಡರು ಅವರನ್ನು ಸಮಾಧಾನಮಾಡಿ ಕುಳ್ಳರಿಸಿದರು.