ಬೆಂಗಳೂರು: ಸತ್ಯಕ್ಕೆ ಹೆಸರಾದ ನಮ್ಮ ರಾಷ್ಟ್ರದ ಉಕ್ಕು ಸಚಿವ ಕುಮಾರಸ್ವಾಮಿ ಅವರು ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಗಣಿ ಮಂಜೂರು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಸಹಿಯೇ ಅಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ ಸಹಿ ಫೋರ್ಜರಿ ಆಗಿರುವ ಬಗ್ಗೆ ದೂರು ಯಾಕೆ ನೀಡಿಲ್ಲ? ತಮಗೆ ಹತ್ತಿರದ ಅಥವಾ ಅನುಕೂಲವಾದ ಠಾಣೆ ಅಥವಾ ಆನ್‌ಲೈನ್‌ನಲ್ಲೇ ಈ ಸಂಬಂಧ ದೂರು ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.
ಕುಮಾರಸ್ವಾಮಿ ಅವರು ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಗಣಿ ಮಂಜೂರು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಹಾಕಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅವರು ತಮ್ಮ ಅಫಿದವಿತ್‌ನಲ್ಲಿ ಈ ಜಮೀನನ್ನು ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಮಂಜೂರು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರಲ್ಲೇ ಎಫ್ಐಆರ್ ದಾಖಲಾಗಿದ್ದು, ಈ ಪ್ರಕರಣದ ತನಿಖೆ ಬಾಕಿ ಇದೆ ಎಂದು ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿ ಅವರೇ, ಈ ಸಹಿ ನಿಮ್ಮದಲ್ಲವಾದರೆ ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಆ ಆದೇಶವನ್ನು ನೀವೇ ನೀಡಿರುವುದಾಗಿ ಒಪ್ಪಿಕೊಂಡಿರುವುದು ಯಾಕೆ ಎಂದು ಡಿಕೆಶಿ ಪ್ರಶ್ನಿಸಿದರು. ಮಿಸ್ಟರ್ ಕುಮಾರಸ್ವಾಮಿ ನಿಮ್ಮ ವಿರುದ್ಧ 2011ರಲ್ಲಿ ಯಡಿಯೂರಪ್ಪ ಅವರ ಸರಕಾರ ಯಾಕೆ ದೂರು ದಾಖಲಿಸಿತ್ತು ಎಂದು ಲೇವಡಿ ಮಾಡಿದರು.
ಇನ್ನೊಬ್ಬರ ಕುಟುಂಬದ ವಿಚಾರಕ್ಕೆ ಹೋಗಬಹುದಾ?
ತಮ್ಮ ಕುಟುಂಬದ ಸುದ್ದಿಗೆ ಯಾರೂ ಬರಬಾರದು. ಆದರೆ ಅವರು ಯಾರ ಕುಟುಂಬದ ವಿಚಾರಕ್ಕೆ ಬೇಕಾದರೂ ಹೋಗಬಹುದಾ ಎಂದು ಶಿವಕುಮಾರ್ ಖಾರವಾಗಿ ಕೇಳಿದರು. ನಾನು ಅವರ ಕುಟುಂಬ ಹಾಗೂ ಸಹೋದರನ ಆಸ್ತಿ ಬಗ್ಗೆ ಅನೇಕ ಪ್ರಶ್ನೆ ಕೇಳಿದ್ದಾರೆ. ಈವರೆಗೂ ಉತ್ತರ ನೀಡಿಲ್ಲ. ನನ್ನ ಕುಟುಂಬದ ಸುದ್ದಿಗೆ ಬರುತ್ತೀಯಾ ಎಂದೆಲ್ಲ ಅವರು ಕಿಡಿಕಾರಿದ್ದಾರೆ.
ಅವರು ಕೂಡ ಯಾರ ಕುಟುಂಬದ ವಿಚಾರಕ್ಕೆ ಹೋಗಿದ್ದಾರೆ ಎಂಬುದನ್ನು ಹೇಳಬೇಕು. ಅವರು ಹೇಗೆ ಬೇರೆಯವರ ಕುಟುಂಬದ ವಿಚಾರಕ್ಕೆ ಹೋಗುತ್ತಾರೋ ಅದೇ ರೀತಿ ಬೇರೆಯವರು ಅವರ ಕುಟುಂಬದ ವಿಚಾರಕ್ಕೆ ಹೋಗುತ್ತಾರೆ ಎಂದು ತಿರುಗೇಟು ನೀಡಿದರು.