Advertisement

ಮೈತ್ರಿ ಸರಕಾರ ಪತನಕ್ಕೆ ಕಾಂಗ್ರೆಸ್‌ ನಾಯಕರ ಸಂಚು

02:16 AM Jul 23, 2020 | Hari Prasad |

ಬೆಂಗಳೂರು: ನನ್ನ ನೇತೃತ್ವದ ಮೈತ್ರಿ ಸರಕಾರದ ಪತನದ ಹಿಂದೆ ಬಿಜೆಪಿ ನಾಯಕರ ಶ್ರಮದ ಜತೆಗೆ ಕಾಂಗ್ರೆಸ್‌ನ ಒಂದು ವರ್ಗದ ನಾಯಕರಿಂದಲೂ ವ್ಯವಸ್ಥಿತ ಸಂಚು ನಡೆದಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ನೇರವಾಗಿಯೇ ಆರೋಪಿಸಿದ್ದಾರೆ.

Advertisement

ಮೈತ್ರಿ ಸರಕಾರ ಪತನಗೊಂಡು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಜತೆಗೆ ಝೂಮ್‌ ಆ್ಯಪ್‌ ಹಾಗೂ ಫೇಸ್‌ಬುಕ್‌ ಲೈವ್‌ ಮೂಲಕ ನಡೆಸಿದ ಸಂವಾದದಲ್ಲಿ, ನಾನು ಅಧಿಕಾರ ವಹಿಸಿಕೊಂಡ ದಿನದಿಂದಲೂ ಕಾಂಗ್ರೆಸ್‌ನ ಒಂದು ವರ್ಗದ ನಾಯಕರು ಈ ಸರಕಾರ ಹೆಚ್ಚು ದಿನ ಇರುವುದಿಲ್ಲ ಎನ್ನುತ್ತಲೇ ಬಂದರು. ಸರಕಾರ ನಡೆಸಲು ಕಾಂಗ್ರೆಸ್‌ನವರು ಯಾವ ರೀತಿ ಅಡಚಣೆ ಮಾಡಿದರು, ಏನೆಲ್ಲ ಸಮಸ್ಯೆ ಸೃಷ್ಟಿಸಿದರು ಎಂಬ ಬಗ್ಗೆ ನಾನು ಬಹಿರಂಗ ಚರ್ಚೆಗೂ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

ಸುಲಲಿತ ಆಡಳಿತ ಸುಲಭವಾಗಿರಲಿಲ್ಲ. ನನ್ನ ಕಾರ್ಯಕರ್ತರ ಹಿತ ಕಾಯಲು ಸಾಧ್ಯವಾಗಿಲ್ಲ. ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಪಕ್ಷದ ಕಚೇರಿಯಲ್ಲಿ ನೀವು ಏರ್ಪಡಿಸಿದ್ದ ಸಮ್ಮಾನ ಕಾರ್ಯಕ್ರಮದಲ್ಲಿ ನಾನು ಕಣ್ಣೀರು ಹಾಕುವಂತಾಯಿತು. ಅದಕ್ಕೆ ಬೇರೆ ಬೇರೆ ವ್ಯಾಖ್ಯಾನ ನೀಡಲಾಯಿತು. ನಾನು ಪ್ರತಿ ಹಂತದಲ್ಲೂ ಕಾಂಗ್ರೆಸ್‌ ನಾಯಕರು ಹಾಗೂ ಶಾಸಕರ ಅನುಮತಿಗೆ ಕಾಯಬೇಕಿತ್ತು ಎಂದು ಹೇಳಿದರು.

ನಿರೀಕ್ಷೆ ಹುಸಿ
ಮೈತ್ರಿ ಸರಕಾರದ ಪತನಕ್ಕೆ ಜತೆಗೂಡಿದ್ದ ಕೆಲವು ಕಾಂಗ್ರೆಸ್‌ ನಾಯಕರ ನಿರೀಕ್ಷೆ ಈಗ ಹುಸಿಯಾಗಿದ್ದು ಪಶ್ಚಾತ್ತಾಪ ಪಡುತ್ತಿದ್ದಾರೆ. ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಕೆಲವರು ಭ್ರಮಿಸಿದ್ದರು. ಆದರೆ ಬಿಜೆಪಿಯವರು ಒಂದು ಕ್ಷಣವೂ ಅಧಿಕಾರ ಬಿಡುವುದಿಲ್ಲ ಎಂಬುದೀಗ ಅವರಿಗೆ ಮನವರಿಕೆಯಾಗಿದೆ ಎಂದರು. ರಾಜ್ಯ ಬಿಜೆಪಿ ಸರಕಾರ‌ವು ನೆರೆ ಹಾಗೂ ಕೋವಿಡ್‌ ಸೋಂಕು ಹಾವಳಿಯ ನಿರ್ವಹಣೆಯಲ್ಲಿ ವಿಫ‌ಲವಾಗಿದೆ ಎಂದು ಹೇಳಿದರು.

ಮತ್ತೆ ಅಧಿಕಾರಕ್ಕೇರುವ ಸಂಕಲ್ಪ
ನಾನು ರಾಜಕಾರಣಕ್ಕೆ ಬಂದದ್ದೇ ಆಕಸ್ಮಿಕ. ಮೊದಲನೇ ಪ್ರಯತ್ನದಲ್ಲೇ ತಮ್ಮೆಲ್ಲರ ಆಶೀರ್ವಾದದಿಂದ ಮುಖ್ಯಮಂತ್ರಿಯಾದೆ. ಜನಪರ ಕಾರ್ಯಕ್ರಮಗಳನ್ನು ಕೊಟ್ಟೆ. ಕೋವಿಡ್‌ ಬಳಿಕ ಪಕ್ಷ ಸಂಘಟನೆಗೆ ಇನ್ನಷ್ಟು ಒತ್ತು ನೀಡಲಾಗುವುದು.

Advertisement

2006ರಿಂದ 2018ರವರೆಗೆ ಪ್ರತಿ ಚುನಾವಣೆಯಲ್ಲಿ ಹಲವಾರು ರೀತಿಯ ಕುತಂತ್ರಗಳು, ಅಪಪ್ರಚಾರದ ನಡುವೆಯೂ ಪಕ್ಷವನ್ನು ಉಳಿಸಿಕೊಂಡು ಬಂದಿರುವುದು ನಿಮ್ಮಂತಹ ನಿಷ್ಠಾವಂತ ಕಾರ್ಯಕರ್ತರೇ. ರಾಜ್ಯದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ತರಲು ಸಂಕಲ್ಪ ತೊಡೋಣ ಎಂದು ಎಚ್‌.ಡಿ. ಕುಮಾರ ಸ್ವಾಮಿ ತಿಳಿಸಿದರು.

ಮುಖಂಡರು ಭಾಗಿ
ಸಂವಾದದಲ್ಲಿ ಝೂಮ್‌ ಆ್ಯಪ್‌ ಮೂಲಕ 2,900, ಫೇಸ್‌ಬುಕ್‌ ಲೈವ್‌ ಮೂಲಕ 3,266 ಕಾರ್ಯಕರ್ತರು ಹಾಗೂ ಮುಖಂಡರು ಪಾಲ್ಗೊಂಡಿದ್ದರು. ರಾಜ್ಯದೆಲ್ಲೆಡೆಯಿಂದ ಪಕ್ಷದ ಜಿಲ್ಲಾಧ್ಯಕ್ಷರು, ವಿಧಾನ ಸಭೆ ಕ್ಷೇತ್ರಗಳ ಅಧ್ಯಕ್ಷರು ಸಹ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next