Advertisement

ಕಾರ್ಯಕ್ರಮಕ್ಕೆ ಆಹ್ವಾನಿಸಿದವರೇ ಉಪಸ್ಥಿತರಿಲ್ಲ: ಕುಮಾರಸ್ವಾಮಿ ಅಸಮಾಧಾನ

05:14 PM Aug 23, 2021 | Team Udayavani |

ಗದಗ: ಸ್ಥಳೀಯ ಶಾಸಕರ ಅನುಪಸ್ಥಿತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವುದಿಲ್ಲ. ಜನ ಬಯಸುತ್ತಿದ್ದಾರೆ ಎಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದವರೇ ಬೇರೆ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಗ್ರಾಮಸ್ಥರ ಅಪೇಕ್ಷೆಯಂತೆ ಸುಗ್ನಳ್ಳಿ ಗ್ರಾಮಕ್ಕೆ ಭೇಟಿ ನೀಡುವುದಾಗಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಶಿರಹಟ್ಟಿ ತಾಲೂಕಿನ ಸುಗ್ನಹಳ್ಳಿ ಗ್ರಾಮದಲ್ಲಿ ಕೆರೆ ಅಭಿವೃದ್ಧಿಗೆ 10 ಕೋಟಿ ರೂ. ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಸುಗ್ನಳ್ಳಿಯ ಜನರು ತಮ್ಮನ್ನು ಬಯಸುತ್ತಿದ್ದಾರೆ. ಆಲದಮ್ಮನ ಕೆರೆ ಮತ್ತು ಬನ್ನಿಕೊಪ್ಪ ಕೆರೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಸ್ವತಃ ಬಿಜೆಪಿಯ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಆಹ್ವಾನಿಸಿದ್ದರು. ಆದರೆ, ಇವತ್ತು ಆಹ್ವಾನ ನೀಡಿದವರೇ, ಏಕಾಏಕಿ ಕಾರ್ಯಕ್ರಮವನ್ನು ಮುಂದೂಡಿ, ಬೇರೆಲ್ಲೋ ಹೋಗಿದ್ದಾರೆ. ಕಾರ್ಯಕ್ರಮಕ್ಕೆ ಆಹ್ವಾನಿಸಿ, ಏಕಾಏಕಿ ಮುಂದೂಡಿದ ಬಗ್ಗೆ ಸ್ಥಳೀಯ ಶಾಸಕರೇ ಉತ್ತರಿಸಬೇಕು. ಇಲ್ಲಿನ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ನಾನು ಸರಕಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಿಲ್ಲ. ಈ ಬಗ್ಗೆ ಯಾರನ್ನೂ ದೂಷಿಸುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಕಣಕುಂಬಿ, ಆಲಮಟ್ಟಿ, ತಲಕಾಡು ಹಾಗೂ ಸಕಲೇಶಪುರದಿಂದ ಜೆಡಿಎಸ್ ಪಾದಯಾತ್ರೆ: ಎಚ್ ಡಿಕೆ

ಸಮ್ಮಿಶ್ರ ಸರಕಾರದಲ್ಲಿ ಶಿರಹಟ್ಟಿ ಅಭಿವೃದ್ಧಿಗೆ 50 ಕೋಟಿ ರೂ. ಕೋರಿ ಸ್ಥಳೀಯ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಅರ್ಜಿ ಸಲ್ಲಿಸಿದ್ದರು. ಅವರು ಯಾವುದೇ ಪಕ್ಷದವರಾಗಿದ್ದರೂ, ಪರವಾಗಿಲ್ಲ ಅಭಿವೃದ್ಧಿಯೇ ಮುಖ್ಯವೆಂಬ ಧೋರಣೆಯಿಂದ ಆಗ 50 ಕೋಟಿ ರೂ. ಮಂಜೂರು ಮಾಡಿದ್ದೆ. 2007ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಸುಗ್ನಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೆ. ಆಗ ಜನರಿಗೆ ನೀಡಿದ್ದ ಭರವಸೆಯಂತೆ ಅನುದಾನ ಬಿಡುಗಡೆ ಮಾಡಿದ್ದೇನೆ. ಗ್ರಾಮಕ್ಕೆ ನನ್ನ ಭೇಟಿಯಿಂದ ಇದರ ಶ್ರೇಯಸ್ಸು ಜೆಡಿಎಸ್‌ಗೆ ಸಲ್ಲುತ್ತದೆ ಎಂದು ಭಾವಿಸದೆ, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಗಳ ದೃಷ್ಟಿಯಿಂದ ರಾಜ್ಯದಲ್ಲಿ ಬೇರು ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ಜನತೆ ಕೂಡಾ ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷ ಜೆಡಿಎಸ್‌ನತ್ತ ಒಲವು ತೋರುತ್ತಿದ್ದಾರೆ. ಪಂಚಾಯತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಜೆಡಿಎಸ್ ಗೆಲ್ಲಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next