ಚನ್ನರಾಯಪಟ್ಟಣ: ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆ ಪ್ರಾರಂಭಿಸಿದ್ದು, ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ಸಂಚಾರ ಮಾಡಿ ಹಾಲಿ ಶಾಸಕರ ಜೊತೆ ಚರ್ಚಿಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ. ರಾಮಸ್ವಾಮಿ ಜೊತೆ ಈಗಾಗಲೇ ಮಾತನಾಡಿದ್ದೇನೆ. ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಜಿಲ್ಲಾ ಪ್ರವಾಸದ ವೇಳೆ ಮತ್ತೂಮ್ಮೆ ಮಾತನಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರನ್ನೂ ಭೇಟಿ ಮಾಡಲಾಗುವುದು. ಅವರು ಎಲ್ಲಿಯೂ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಬಹಿರಂಗವಾಗಿ ತಿಳಿಸಿಲ್ಲ. ನಾನು ಅವರ ಕ್ಷೇತ್ರದಲ್ಲಿ ಪ್ರವಾಸ ಮಾಡಿದಾಗ ಅವರು ಅಂತಿಮ ತೀರ್ಮಾನ ತಿಳಿಸಲೇಬೇಕು. ಚುನಾವಣೆ ಸಮೀಪಿಸುತ್ತಿದೆ ಈ ವೇಳೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಅವರ ಭೇಟಿ ನಂತರ ಪಕ್ಷದ ತೀರ್ಮಾನಕ್ಕೆ ಎಲ್ಲರೂ ತಲೆ ಬಾಗಬೇಕು ಎಂದರು.
ಮುಂದಿನ ದಿನಗಳಲ್ಲಿ ಪಂಚರತ್ನ ಯಾತ್ರೆಯಲ್ಲಿ ನಾನೂ ಪಾಲ್ಗೊಂಡು ರಾಜ್ಯದ ಜನರಿಗೆ ಸರ್ಕಾರಗಳು ಮಾಡುತ್ತಿರುವ ಅನ್ಯಾಯವನ್ನು ತಿಳಿಸುತ್ತೇನೆ. ಜೆಡಿಎಸ್ ಪಕ್ಷವನ್ನು ಏಕಾಂಗಿಯಾಗಿ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಇದರಿಂದ ಕನ್ನಡಿಗರಿಗೆ ಹಾಗೂ ರೈತರಿಗೆ ಸಾಕಷ್ಟು ಲಾಭವಿದೆ ಎಂದರು.