Advertisement

H.D. Kumaraswamy ವಿರುದ್ಧ ಚಾರ್ಜ್‌ಶೀಟ್‌: ಕಾಂಗ್ರೆಸ್‌ ಪಾಳಯಕ್ಕೆ ಪ್ರತ್ಯಸ್ತ್ರ

01:02 AM Aug 21, 2024 | Team Udayavani |

ಬೆಂಗಳೂರು : ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರಣೆಗೆ ಅನುಮತಿ ನೀಡಿದ ಬೆನ್ನಲ್ಲೇ ವಿಶೇಷ ತನಿಖಾ ದಳ (ಎಸ್‌ಐಟಿ)ವು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಗೆ ಅನುಮತಿ ನೀಡುವಂತೆ ರಾಜ್ಯಪಾಲರನ್ನು ಕೋರಿದೆ. ಇದು ಈಗ “ಕೈ’ ಪಾಳಯಕ್ಕೆ ಪ್ರತ್ಯಸ್ತ್ರವಾಗಿದ್ದು ಈ ಸಂಬಂಧ ರಾಜ್ಯಪಾಲರ ಮೇಲೆ ಒತ್ತಡ ಹೇರಲು ಆರಂಭಿಸಿದೆ.

Advertisement

ಒಂದು ದಿನದ ಹಿಂದಷ್ಟೇ “ನವರಂಗಿ ನಕಲಿ ಸ್ವಾಮಿ ವಿರುದ್ಧ ಇಲ್ಲದ ಕ್ರಮ ನಮ್ಮ ಮೇಲೆ ಯಾಕೆ? ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಯಾಕೆ?’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿ ಕಾಂಗ್ರೆಸ್‌ನ ಬಹುತೇಕ ಎಲ್ಲ ನಾಯಕರು ರಾಜ್ಯಾದ್ಯಂತ ನಡೆಸಿದ ಪ್ರತಿಭಟನೆಯಲ್ಲಿ ನೇರವಾಗಿ ವಾಗ್ಧಾಳಿ ನಡೆಸಿದ್ದರು. ಅದೇ ದಿನ ಸಂಜೆ ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಗೆ ಅನುಮತಿ ಕೋರಿ ರಾಜಭವನಕ್ಕೆ ಪತ್ರ ಸಲ್ಲಿಕೆಯಾಗಿದೆ. ಇದರ ಜತೆಗೆ ಮಂಗಳವಾರ ಸಚಿವರು, ಶಾಸಕರಿಂದ ಒತ್ತಾಯವೂ ಕೇಳಿಬಂದಿದೆ.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹೊÉàಟ್‌ ಅನುಮತಿ ನೀಡಿದ್ದಾರೆ. ಆದರೆ ಕುಮಾರಸ್ವಾಮಿ ವಿರುದ್ಧವೂ ಚಾರ್ಜ್‌ಶೀಟ್‌ ಸಲ್ಲಿಕೆಗೆ ಈ ಹಿಂದೆ ಅನುಮತಿ ಕೋರಲಾಗಿತ್ತು. ಆದರೆ ಕೊಟ್ಟಿರಲಿಲ್ಲ. ಈಗ ಮತ್ತೂಮ್ಮೆ ಅನುಮತಿಗಾಗಿ ಎಸ್‌ಐಟಿ ಪತ್ರ ಬರೆದಿದೆ. ಈಗಲಾದರೂ ಕ್ರಮಕ್ಕೆ ಮುಂದಾಗಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಆಗ್ರಹಿಸಿದರು.

ರಾಜ್ಯಪಾಲರು ತಮ್ಮನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ ಅಂದುಕೊಂಡರೆ ಹೇಗೆ? ಅವರು ಅರ್ಜಿಗೆ ಅನುಮತಿ ನೀಡಬೇಕು ಇಲ್ಲವೇ ತಿರಸ್ಕರಿಸಬೇಕು. ಸಿದ್ದರಾಮಯ್ಯ ವಿರುದ್ಧ ಶರವೇಗದಲ್ಲಿ ಅನುಮತಿ ಕೊಡುತ್ತಾರೆ. ಆದರೆ ಮತ್ತೂಂದು ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದು ಅನುಮಾನಕ್ಕೆಡೆಮಾಡಿಕೊಡುತ್ತದೆ. ರಾಜ್ಯಪಾಲರು ಪಕ್ಷಪಾತವಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಸರಿ ಅಲ್ಲ, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ವಿಪಕ್ಷ ನಾಯಕರ ವಿರುದ್ಧ ಪುರಾವೆಗಳಿವೆ. ಲೋಕಾಯುಕ್ತ ಸಂಸ್ಥೆಯವರೇ ತನಿಖೆ ಮಾಡಿದಾಗ ಮೇಲ್ನೋಟಕ್ಕೆ ಆರೋಪ ಸಾಬೀತಾಗಿದೆ. ಆದರೆ ಚಾರ್ಜ್‌ಶೀಟ್‌ಗೆ ಅನುಮತಿ ಕೊಟ್ಟಿಲ್ಲ. ಪಕ್ಷಪಾತ ಮಾಡುವ ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳಬೇಕು ಇಲ್ಲವೇ ರಾಜ್ಯಪಾಲರು ತತ್‌ಕ್ಷಣ ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

Advertisement

ವರದಿಯಲ್ಲಿ ಹೆಸರಿದ್ದವರು ಸಚಿವರಾಗಬಹುದೇ?
ಲೋಕಾಯುಕ್ತರ ವರದಿಯಲ್ಲಿ ಎಚ್‌.ಡಿ. ಕುಮಾರ ಸ್ವಾಮಿ ಕಾನೂನುಬಾಹಿರವಾಗಿ ಶಿಫಾರಸು ಮಾಡಿರುವ ಬಗ್ಗೆ ಪ್ರಸ್ತಾವವಿದೆ. ವಿನಯ್‌ ಗೋಯೆಲ್‌ ಎಂಬಾತ ಗಣಿಗಾರಿಕೆಗೆ ಅರ್ಜಿಯನ್ನೇ ಹಾಕಿರಲಿಲ್ಲ. ಆದರೆ ಅವನಿಗೆ ಕುಮಾರಸ್ವಾಮಿ ಅನುಕೂಲ ಮಾಡಿಕೊಟ್ಟಿದ್ದಾರೆ. ಹೀಗೆ ವರದಿಯಲ್ಲಿ ಹೆಸರು ಇರುವವರು ಕೇಂದ್ರ ಸಚಿವರಾಗಬಹುದೇ? ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಕೇಳಿದ್ದಾರೆ.

ಬಿಜೆಪಿಯ ಕೆಲವರ ಮೇಲೂ ಅನುಮತಿ ತೂಗುಗತ್ತಿ
ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಗೆ ಎಸ್‌ಐಟಿ ರಾಜ್ಯಪಾಲರ ಅನುಮತಿ ಕೋರಿದ ಬೆನ್ನಲ್ಲೇ ಬಿಜೆಪಿಯ ಕೆಲವರ ಮೇಲೂ ಈಗ “ಅನುಮತಿ’ಯ ತೂಗುಗತ್ತಿ ನೇತಾಡುತ್ತಿದೆ. ವರದಿಯಲ್ಲಿ ಇನ್ನೂ ಹಲವು ನಾಯಕರ ಹೆಸರುಗಳು ಉಲ್ಲೇಖವಾಗಿದ್ದು, ಅವರ ವಿರುದ್ಧವೂ ಕ್ರಮಕ್ಕೆ ರಾಜ್ಯಪಾಲರಿಗೆ ಮತ್ತೆ ಅನುಮತಿಗಾಗಿ ತನಿಖಾ ಸಂಸ್ಥೆಗಳು ಪತ್ರ ಬರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next