ಮೈಸೂರು: ಹಿಜಾಬ್ ವಿಚಾರದಲ್ಲಿ ಮುಖ್ಯಮಂತ್ರಿಗಳು ವಿಫಲರಾಗಿದ್ದಾರೆ. ನ್ಯಾಯಾಲಯಕ್ಕೆ ಹೋಗುವ ಮುನ್ನವೇ ಸಮಸ್ಯೆ ಬಗೆಹರಿಸಬೇಕಿತ್ತು. ಆದರೆ ಆ ಪ್ರಯತ್ನವನ್ನೇ ಅವರು ಮಾಡಲಿಲ್ಲ ಎಂದು ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯಕ್ಕೆ ಹೋಗಿರುವದು ಕಳ್ಳನಿಗೊಂದು ಪಿಳ್ಳೆ ನೆಪ. ಉರಿಯುವ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಪಕ್ಷ ಬಿಡುವ ವಿಚಾರಕ್ಕೆ ಮಾತನಾಡಿದ ಅವರು, ಸದ್ಯದಲ್ಲೇ ಸಿಎಂ ಇಬ್ರಾಹಿಂ ಮನೆಗೆ ಸಿದ್ದರಾಮಯ್ಯ ಊಟಕ್ಕೆ ಹೋಗುತ್ತಾರೆ. ಇಬ್ರಾಹಿಂ ಮನಸಿಗೆ ಬೇಜಾರು ನೋವು ಮಾಡಿಕೊಂಡಿದ್ದರು, ಸಿದ್ದರಾಮಯ್ಯ ಸೂಚನೆ ಮೇರೆಗೆ ನಾನು ಹೋಗಿ ಮಾತನಾಡಿದ್ದೇನೆ. ಇಬ್ರಾಹಿಂ ಕೂಡಾ ಪ್ರೀತಿ ವಿಶ್ವಾಸದಿಂದ ಮಾತನಾಡಿದರು. ದೇಶದಲ್ಲಿ ಅಧರ್ಮ ಅನೀತಿ ತುಂಬಿದೆ. ಸಂವಿಧಾನಕ್ಕೆ ಧಕ್ಕೆ ಬಂದಿದೆ, ಇದರ ವಿರುದ್ದ ನಾವು ಹೋರಾಟ ಮಾಡಬೇಕೆಂದು ಹೇಳಿದ್ದೇನೆ. ಬೇಜಾರು ನೋವು ಮಾಡಿಕೊಳ್ಳದಂತೆ ಮನವಿ ಮಾಡಿದ್ದೇನೆ. ಪ್ರಜಾಪ್ರಭುತ್ವ ಸಂರಕ್ಷಣೆ ಮಾಡೋಣ ಅಂತಾ ತಿಳಿಸಿದ್ದೇನೆ ಎಂದರು.
ಇದನ್ನೂ ಓದಿ:ಹಿಜಾಬ್ ವಿವಾದ: ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸರಿಂದ ರೂಟ್ ಮಾರ್ಚ್
ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ, ಆಲೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಇಬ್ರಾಹಿಂ ತಿಳಿಸಿದ್ದಾರೆ. ಹೀಗಾಗಿ ಅವರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಎಂದು ಅನಿಸುವುದಿಲ್ಲ ಎಂದು ಮಾಜಿ ಸಚಿವ ಡಾ ಎಚ್ ಸಿ ಮಹದೇವಪ್ಪ ಹೇಳಿದರು.