ಅಷ್ಟಕ್ಕೂ ಆತ ಯಾರು? ಬಡತನವೂ ಅಲ್ಲ, ಸಹ ಸ್ಪರ್ಧಿ, ಎದುರಾಳಿ ಕ್ರೀಡಾಪಟುಗಳೂ ಅಲ್ಲ. ಕ್ರೀಡಾಪಟುಗಳು ಅಭ್ಯಾಸದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಂತೆ, ಬಿಡುವಿಲ್ಲದೇ ನಿರಂತರವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಕಾಟ ನೀಡುವ ಆ ವೈರಿಯೇ “ಗಾಯ’. ಗಾಯದ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದು ಎಂಥ ಕ್ರೀಡಾಪಟುವಿಗೂ ಸುಲಭವಲ್ಲ. ಗಾಯದಿಂದ ಎಷ್ಟೋ ಕ್ರೀಡಾಪ್ರತಿಭೆಗಳ ವೃತ್ತಿ ಜೀವನವೇ ಅಂತ್ಯವಾಗಿದೆ. ಸದ್ಯ ಭಾರತದ ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ಕೂಡ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಇದೇ ಕಾರಣಕ್ಕೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
Advertisement
ಅಲೆ ಸೃಷ್ಟಿಸಿದ ದೀಪಾಭಾರತದಲ್ಲಿ ಜಿಮ್ನಾಸ್ಟಿಕ್ ಅಲೆಯನ್ನು ಸೃಷ್ಟಿಸಿದವರೇ ದೀಪಾ ಕರ್ಮಾಕರ್. ಅದು 2016ರ ರಿಯೋ ಒಲಿಂಪಿಕ್ಸ್. ಜಿಮ್ನಾಸ್ಟಿಕ್ ಕೂಟದಲ್ಲಿ ಪಾಲ್ಗೊಂಡ ಭಾರತದ ಏಕೈಕ ಸ್ಪರ್ಧಿ ದೀಪಾ ಆಗಿದ್ದರು. ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ 8ನೇಯವರಾಗಿ ಫೈನಲ್ ಪ್ರವೇಶಿಸಿದ್ದರು. ಫೈನಲ್‌ನಲ್ಲಿ ಕೂಡ ಗಮನಾರ್ಹ ಪ್ರದರ್ಶನ ನೀಡಿದ್ದರು. ದುರಾದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಪದಕ ಕೈತಪ್ಪಿದ್ದರಿಂದ 4ನೇ ಸ್ಥಾನಕ್ಕೆ ತೃಪ್ತರಾದರು. ಆದರೆ ಭಾರತೀಯರ ಹೃದಯ ಗೆಲ್ಲುವಲ್ಲಿ ದೀಪಾ ಯಶಸ್ವಿಯಾದರು.
ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಕೈ ತಪ್ಪಿದಾಗ ದೀಪಾಗೆ ಮುಂದಿನ ಕನಸು ಇದ್ದದ್ದು, ಟೊಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಕನಸು. ಇದನ್ನು ಆಕೆ ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದರೆ, “ಗಾಯ’ ದೀಪಾಳನ್ನು ಕಾಡಿಸುತ್ತಿದೆ. ಹೀಗಾಗಿ ದೀಪಾ ಟೊಕಿಯೋ ಒಲಿಂಪಿಕ್ಸ್‌ಗೆ ಸಿದ್ಧರಾಗುತ್ತಾರಾ? ಎಂಬುದ ಹಲವರ ಪ್ರಶ್ನೆ. ಆಕೆಯ ಕೋಚ್ ಬಿಶ್ವೇಶ್ವರ ನಂದಿ, ದೀಪಾ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ವರ್ಷ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿಯೇ ಸ್ಪರ್ಧೆ ನಡೆಸಲಿದ್ದಾರೆ ಎಂದಿದ್ದಾರೆ. ಅವರ ಮಾತು ನಿಜವಾಗಲಿ.