ವಾರಾಣಸಿ: ಜ್ಞಾನವಾಪಿ ಶೃಂಗಾರ ಗೌರಿ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿರುವಂತೆಯೇ, ಪ್ರಕರಣದ ಬಗ್ಗೆ ಹಿಂದೂ-ಮುಸ್ಲಿಂ ಎರಡೂ ಸಮುದಾಯ ಭಿನ್ನ ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದರೂ ಕಾಶಿಯು “ಗಂಗಾ-ಜಮುನಿ ತಾಹ್ಜೀಬ್ ‘(ಹಿಂದೂ-ಮುಸ್ಲಿಂ ಸಾಮರಸ್ಯ) ಆಗಿಯೇ ಉಳಿಯಬೇಕು ಎನ್ನುವುದು ಎರಡೂ ಧರ್ಮಗಳ ಜನರ ಆಶಯವಾಗಿದೆ.
ಕಳೆದ ಗುರುವಾರವಷ್ಟೇ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಹಿಂದೂ ಭಕ್ತಾದಿಗಳು ಸಲ್ಲಿಸಿರುವ ಅರ್ಜಿಯ ಕುರಿತು ವಾರಾಣಸಿ ಜಿಲ್ಲಾ ನ್ಯಾಯಾಲಯದ ಆದೇಶ ಹೊರಬೀಳುವವರೆಗೂ ಕಾಯುವುದಾಗಿ ಹೇಳಿದೆ.
ಇದರ ಬೆನ್ನಲ್ಲೇ ಮಾತನಾಡಿರುವ ಕಾಶಿ ವಿಶ್ವನಾಥ ದೇಗುಲದ ಮಾಜಿ ಮಹಾಂತ ಕುಲಪತಿ ತಿವಾರಿ, “ಕೆಲವು ವ್ಯಕ್ತಿಗಳು ಜ್ಞಾನವಾಪಿ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಇಲ್ಲಿಂದ ದೆಹಲಿಗೆ ಒಯ್ಯುತ್ತಿದ್ದಾರೆ. ಅವರಿಗೆ ಪ್ರಚಾರವಷ್ಟೇ ಮುಖ್ಯ. ನಾವು ಜಿಲ್ಲಾ ಕೋರ್ಟ್‌ನ ತೀರ್ಪಿಗೆ ಕಾಯುತ್ತಿದ್ದೇವೆ. ಅದು ನಮ್ಮ ಪರವಾಗಿ ಇರದಿದ್ದರೆ ಹೈಕೋರ್ಟ್ ಮೊರೆ ಹೋಗುತ್ತೇವೆ’ ಎಂದಿದ್ದಾರೆ.
ಅಂಜುಮಾನ್ ಇಂತೆಜಾಮಿಯಾ ಕಮಿಟಿ ಕಾರ್ಯದರ್ಶಿ ಮೊಹಮ್ಮದ್ ಯಾಸಿನ್ ಕೂಡ, ಕಾಶಿಯ ಜನರೆಲ್ಲರೂ ಸ್ಥಳೀಯ ನ್ಯಾಯಾಲಯವೇ ತೀರ್ಪು ನೀಡಲಿ ಎಂದು ಬಯಸುತ್ತಿದ್ದಾರೆ ಎಂದಿದ್ದಾರೆ.
ಸ್ಥಳೀಯರಾದ ಸ್ವರ್ಣ ಮಖರ್ಜಿ ಮಾತನಾಡಿ, “ಇದು ಬನಾರಸ್‌ನ ಹಿಂದೂ-ಮುಸ್ಲಿಂ ಸಹೋದರರಿಗೆ ಸಂಬಂಧಿಸಿದ ವಿಚಾರ. ಇದನ್ನು ರಾಷ್ಟ್ರೀಯ ಮಟ್ಟದ ವಿಷಯವಾಗಿ ಬಿಂಬಿಸಬೇಕಾದ ಅಗತ್ಯವಿಲ್ಲ’ ಎಂದರೆ, “ನಾವು ಕೂಡ ಬನಾರಸ್‌ನ ಘಾಟ್‌ನಲ್ಲಿ ಪವಿತ್ರ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಪ್ರಾರ್ಥನೆ ಸಲ್ಲಿಸುತ್ತೇವೆ.
ಕಾಶಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಹೆಸರಾದದ್ದು. ದೇಗುಲ-ಮಸೀದಿಯ ಹೆಸರಲ್ಲಿ ವಾತಾವರಣ ಹಾಳುಮಾಡಬಾರದು. ಕೋರ್ಟ್ ತೀರ್ಮಾನ ಏನಿದೆಯೋ ಅದನ್ನು ನಾವೆಲ್ಲರೂ ಗೌರವಿಸಬೇಕು’ ಎಂದಿದ್ದಾರೆ ಶಿಯಾ ಜಾಮಾ ಮಸೀದಿಯ ವಕ್ತಾರ ಹಾಜಿ ಸೈಯದ್ ಫರ್ಮಾನ್ ಹೈದರ್.