ವಾರಾಣಸಿ: ಜ್ಞಾನವಾಪಿ ಮಸೀದಿಯಲ್ಲಿನ ಸಮೀಕ್ಷೆಯ ಭಾಗವಾಗಿ ಶಿವಲಿಂಗದ ಕಾರ್ಬನ್ ಡೇಟಿಂಗ್ ಕುರಿತ ಆದೇಶವನ್ನು ಜಿಲ್ಲಾ ನ್ಯಾಯಾಲಯ ಶುಕ್ರವಾರ( ಜುಲೈ 21)ಪ್ರಕಟಿಸಿದ್ದು, ಎಎಸ್ಐ ಸಮೀಕ್ಷೆಯನ್ನು ನಡೆಸುವಂತೆ ಸೂಚಿಸಿದೆ.
ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಪ್ರತಿಕ್ರಿಯಿಸಿ ”ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ನನ್ನ ಅರ್ಜಿಯನ್ನು ಅನುಮೋದಿಸಲಾಗಿದೆ ಎಂದು ನನಗೆ ತಿಳಿಸಲಾಗಿದೆ, ನ್ಯಾಯಾಲಯವು ಜ್ಞಾನವಾಪಿ ಮಸೀದಿ ಸಂಕೀರ್ಣದ ವಾಜು ಟ್ಯಾಂಕ್ ಅನ್ನು ಹೊರತುಪಡಿಸಿ ಎಎಸ್ಐ ಸಮೀಕ್ಷೆಯನ್ನು ನಡೆಸುವಂತೆ ಸೂಚಿಸಿದೆ.”ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಮುಸ್ಲಿಂ ಪರ ವಾದ ಮಂಡಿಸಿದ ವಕೀಲ ಮೊಹಮ್ಮದ್ ತೌಹೀದ್ ಖಾನ್ ಅವರು ಪ್ರತಿಕ್ರಿಯಿಸಿ “ಮೊಹರು ಹಾಕಿದ ವಝುಖಾನಾ’ ಹೊರತುಪಡಿಸಿ ಪ್ರದೇಶವನ್ನು ಎಎಸ್‌ಐ ಸಮೀಕ್ಷೆ ನಡೆಸಲು ಹಿಂದೂ ಪರ ಅರ್ಜಿಯನ್ನು ನ್ಯಾಯಾಲಯ ಅನುಮೋದಿಸಿದೆ. ಆಗಸ್ಟ್ 4 ರೊಳಗೆ ವರದಿ ಸಲ್ಲಿಸಲು ಎಎಸ್‌ಐಗೆ ನ್ಯಾಯಾಲಯ ತಿಳಿಸಿದೆ. ಆದೇಶ ಪ್ರತಿಯನ್ನು ಪರಿಶೀಲಿಸಿದ ನಂತರ ನಾವು ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ.” ಎಂದು ಹೇಳಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ, ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಸಂಪೂರ್ಣ ಜ್ಞಾನವಾಪಿ ಮಸೀದಿ ಆವರಣವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಮೀಕ್ಷೆಗೆ ಕೇಳಲು ನ್ಯಾಯಾಲಯ ಸಮ್ಮತಿಸಿತ್ತು. ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿತ್ತು.
ವಿಷ್ಣು ಜೈನ್ ಅವರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಹಿಂದೂ ಪರವಾಗಿ ಮಾಡಿದ ಸಲ್ಲಿಕೆಗಳಿಗೆ ಉತ್ತರವನ್ನು ಸಲ್ಲಿಸುವಂತೆ ಜ್ಞಾನವಾಪಿ ಮಸೀದಿ ಸಮಿತಿಯನ್ನು ಕೇಳಿದೆ. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ ಕಾರ್ಬನ್ ಡೇಟಿಂಗ್ ಕುರಿತ ತೀರ್ಪು ನೀಡಿದೆ.
ವಾರಾಣಸಿಯ ಜ್ಞಾನವಾಪಿ ಸಂಕೀರ್ಣದ ಆವರಣದಲ್ಲಿರುವ ಶಿವಲಿಂಗದ ವೈಜ್ಞಾನಿಕ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಗೆ ಕೆಲವು ದಿನಗಳ ಹಿಂದೆ ಹಿಂದೂ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದರು.