Advertisement

ಜಿ.ವಿ.ಅಯ್ಯರ್‌ ಮೊಮ್ಮಗಳ ಆ್ಯಕ್ಷನ್‌-ಕಟ್‌

11:33 AM Oct 26, 2017 | Sharanya Alva |

ಕನ್ನಡ ಚಿತ್ರರಂಗಕ್ಕೆ ಇದೀಗ ದಿವಂಗತ ನಿರ್ದೇಶಕ-ನಿರ್ಮಾಪಕ ಜಿ.ವಿ.ಅಯ್ಯರ್‌ ಅವರ ಮೊಮ್ಮಗಳ ಆಗಮನವಾಗಿದೆ. ಈ ಹಿಂದೆಯೇ ಅಯ್ಯರ್‌ ಮೊಮ್ಮಗಳು ಮೊದಲ ಬಾರಿ ಚಿತ್ರವೊಂದನ್ನು ನಿರ್ದೇಶಿಸಲು ಅಣಿಯಾಗಿದ್ದಾರೆ ಎಂಬ ಸುದ್ದಿ ಇತ್ತು. ಈಗ ಸದ್ದಿಲ್ಲದೆಯೇ ಆ ಚಿತ್ರ ನಿರ್ದೇಶಿಸಿ, ಇದೀಗ ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ. ಅಂದಹಾಗೆ, ಅವರು ರಿಷಿಕಾ ಶರ್ಮ. 

Advertisement

ಹೌದು, ರಿಷಿಕಾ ಶರ್ಮ “ಟ್ರಂಕ್‌’ ಮೂಲಕ ನಿರ್ದೇಶಕಿಯಾಗಿ ಎಂಟ್ರಿಕೊಟ್ಟಿದ್ದಾರೆ. ರಿಷಿಕಾ ಶರ್ಮ ಅವರಿಗೆ ಚಿಕ್ಕಂದಿನಿಂದಲೂ ಸಿನಿಮಾ ಮೇಲೆ ಆಸಕ್ತಿ ಇತ್ತು. ತಾತನ ಸಿನಿಮಾಗಳನ್ನು ನೋಡಿದ ಮೇಲೆ ಮತ್ತಷ್ಟು ಪ್ರೀತಿ ಹೆಚ್ಚಾಯ್ತು. ಎಲ್ಲೋ ಒಂದು ಕಡೆ, ಮುಂದೊಂದು ದಿನ ನಿರ್ದೇಶನ ಮಾಡಬೇಕು ಎಂಬ ಆಸೆ ಚಿಗುರಿತ್ತು. ಅದೀಗ “ಟ್ರಂಕ್‌’ ಮೂಲಕ ಈಡೇರಿದೆ. ಈ ಹಿಂದೆ “ಬಿಟೆಕ್‌’ ಎಂಬ ಚಿತ್ರದಲ್ಲಿ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. 

ಆ ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ತೆರೆಕಂಡಿದೆ. ತುಳು ಭಾಷೆಯಲ್ಲಿ ಬಂದ “ಶಟರ್‌ ದುಲೈ’ ಚಿತ್ರದಲ್ಲೊಂದು ಪಾತ್ರ ನಿರ್ವಹಿಸಿ, ಅಲ್ಲೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇದರ ಜತೆಗೆ “ಸೈಕೋ ಶಂಕ್ರ’ ಹಾಗು ‘ನಡುವೆ ಅಂತರವಿರಲಿ’ ಚಿತ್ರದಲ್ಲೂ ನಟಿಸಿದ್ದಾರೆ. ರಿಷಿಕಾ ಶರ್ಮ ಅವರಿಗೆ ನಿರ್ದೇಶನ ಮಾಡಬೇಕು ಅಂತ ಯೋಚನೆ ಬಂದಾಗ, ಆಯ್ಕೆ ಮಾಡಿಕೊಂಡಿದ್ದು ಹಾರರ್‌ ಕಥೆ. 

ಹಾಗಂತ, ಕಲ್ಪನೆಯ ಕಥೆಯಲ್ಲ ಅದು. ಉತ್ತರ ಕರ್ನಾಟಕದಲ್ಲಿ ನಡೆದಂತಹ ನೈಜ ಘಟನೆ ಇಟ್ಟುಕೊಂಡು ಮಾಡಿದ ಚಿತ್ರವಂತೆ. ಉತ್ತರ ಕರ್ನಾಟಕದ ಊರೊಂದರ ಮನೆಯಲ್ಲಿ ನಡೆದ ಒಂದು ಕಥೆ ಚಿತ್ರದ ಹೈಲೈಟ್‌ ಅಂತೆ. ಅದು ಒಂದು ಟ್ರಂಕ್‌ನಿಂದ ಶುರುವಾಗುವ ಕಥೆ. ಎರಡು ಜನರೇಷನ್‌ ಹಿಂದೆ ಇದ್ದಂತಹ ಕಥೆಯನ್ನು ಈಗ ಚಿತ್ರ ಮಾಡಲಾಗಿದೆ. ಒಂದು ಟ್ರಂಕ್‌ ಸುತ್ತ ನಡೆಯೋ ಕಥೆಯೇ ಚಿತ್ರದ ಜೀವಾಳ. ಟ್ರಂಕ್‌ ಒಳಗೊಂದು ಘಟನೆ ನಡೆಯುತ್ತೆ. ಅದನ್ನಿಟ್ಟುಕೊಂಡು ಕಥೆ ವಿಸ್ತರಿಸಿ ಸಿನಿಮಾ ಮಾಡಿದ್ದಾರೆ ರಿಷಿಕಾ ಶರ್ಮ. 

Advertisement

ರಿಷಿಕಾ ಶರ್ಮ ಅವರು ದೆವ್ವ ಬಗ್ಗೆ ಮೊದ ಮೊದಲ ನಂಬಿಕೆ ಇರಲಿಲ್ಲವಂತೆ. “ಘೋಸ್ಟ್‌ ಹಂಟರ್‌ ಸಂಪರ್ಕಿಸಿ, ಟ್ರಾಕ್ಸ್‌ ಎಂಬ ತಂಡದ ಸಹಾಯದೊಂದಿಗೆ ಕೆಲ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ಅಪರೂಪದ ಉಪಕರಣ ಮೂಲಕ ರೇಡಿಯೇಷನ್ಸ್‌ ಬರುವುದನ್ನು ಗಮನಿಸಿದಾಗ, ಅದನ್ನು ಸೂಕ್ಷ್ಮವಾಗಿ ತನಿಖೆ ಮಾಡಿದಾಗ, ಎಲ್ಲೋ ಒಂದು ಕಡೆ ದೆವ್ವ ಇರೋದು ಖಾತರಿ ಆಯ್ತು. ನನಗೂ ಆ ಅನುಭವ ಆಗಿದೆ. ಹಾಗಾಗಿ, ಸಿನಿಮಾಗೆ ಬೇಕಾದಂತೆ ಚಿತ್ರ ಮಾಡಿದ್ದೇನೆ. ನಿಜ ಬದುಕಿನಲ್ಲಿ ದೆವ್ವಕ್ಕೆ ಆಕಾರ ಇಲ್ಲ. ಆದರೆ, ಸಿನಿಮಾಗಾಗಿ ಒಂದು ಆಕಾರವಿದೆ. ಇದೊಂದು ಪಕ್ಕಾ ಹಾರರ್‌ ಚಿತ್ರ ಆಗಿದ್ದು, “ಟ್ರಂಕ್‌’ ಘಟನೆ ಏನೆಂಬುದನ್ನು ಚಿತ್ರದಲ್ಲೇ ನೋಡಬೇಕು’ ಎಂಬುದು ನಿರ್ದೇಶಕರ ಮಾತು.

ಚಿತ್ರಕ್ಕೆ ರಂಗಶಂಕರದ ಸುಖೇಶ್‌ ಶೆಟ್ಟಿ ಸಂಭಾಷಣೆ ಬರೆದಿದ್ದಾರೆ. ಆದಷ್ಟು ಮಾತುಗಳನ್ನು ಕಡಿಮೆಗೊಳಿಸಿ ಕೇವಲ ನಿಶ್ಯಬ್ಧದಲ್ಲೇ ಕಥೆ ಹೇಳುವ ಪ್ರಯತ್ನ ಮಾಡಿದ್ದೇವೆ. ಇನ್ನು, “ದ್ಯಾವ್ರೇ’ ಹಾಗು “ಶಟರ್‌ ದುಲೈ’ ನಿರ್ಮಿಸಿದ್ದ ರಾಜೇಶ್‌ ಭಟ್‌, “ಟ್ರಂಕ್‌’ ಚಿತ್ರಕ್ಕೆ ನಿರ್ಮಾಪಕರು. ಈ ಚಿತ್ರಕ್ಕೆ ನಿಹಾಲ್‌ ನಾಯಕರಾದರೆ, ವೈಶಾಲಿ ದೀಪಕ್‌ ನಾಯಕಿ. ಉಳಿದಂತೆ ಅರುಣ ಬಾಲರಾಜ್‌, ರಂಗಭೂಮಿಯ ಹಿರಿಯ ಕಲಾವಿದೆ ಸುಂದರಶ್ರೀ ಸೇರಿದಂತೆ ಅನೇಕರು ನಟಿಸಿದ್ದಾರೆ. 

ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಭಜರಂಗ್‌, ಸಂದೀಪ್‌ ಕ್ಯಾಮೆರಾ ಹಿಡಿದಿದ್ದಾರೆ. ಕಾರ್ತಿಕ್‌ ರಮನ್‌ ಮತ್ತು ಬೀಟ್‌ ಗುರು ಬ್ಯಾಂಡ್‌ನ‌ ಗಣೇಶನ್‌ ಸಂಗೀತವಿದೆ. ಅಲ್ವಿನ್‌ ಹಿನ್ನೆಲೆ ಸಂಗೀತ ನೀಡಿದರೆ, ಹೇಮಂತ್‌ ಸಂಕಲನವಿದೆ. ಇಷ್ಟರಲ್ಲೇ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next