ಗುತ್ತಲ: ಪಟ್ಟಣದ ಕುರುಬಗೇರಿ ಓಣಿಯಲ್ಲಿ ಹಲವು ದಿನಗಳಿಂದ ಕುರಿಗಳ ಮೇಲೆ ದಾಳಿ ಮಾಡಿ ಕುರಿಗಳನ್ನು ಕೊಲ್ಲುತ್ತಿದ್ದ ನಾಯಿಗಳ ಮೇಲೆ ಆಕ್ರೋಶಗೊಂಡ ನಿವಾಸಿಗಳು ಸುಮಾರು 15-20 ಬೀದಿ ನಾಯಿಗಳನ್ನು ಬೋನಿನಲ್ಲಿ ಹಿಡಿದು ಅವುಗಳನ್ನು ಬೇರೆಡೆ ಸಾಗಿಸುವಂತೆ ಪಪಂ ಅಧಿಕಾರಿಗಳಿಗೆ ಒತ್ತಾಯಿಸಿದರು.
ಹಲವು ದಿನಗಳಿಂದ ಮನೆ ಮುಂದೆ ಕಟ್ಟಿದ್ದ ಕುರಿ, ಕೋಳಿಗಳನ್ನು ಕಚ್ಚಿ ಗಾಯಗೊಳಿಸಿ ಕೊಲ್ಲುತ್ತಿದ್ದ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಲು ಪಪಂಗೆ ಮನವಿ ಮಾಡಿದರೂ ಯಾರೂ ಸ್ಪಂದಿಸಿರಲಿಲ್ಲ. ಇದಕ್ಕೆ ರೋಷಿಹೋದ ಗ್ರಾಮಸ್ಥರು ಸ್ವತಃ ತಾವೇ ಬೋನ್ ಇಟ್ಟು ನಾಯಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾದರು. ನಂತರ ಪಟ್ಟಣ ಪಂಚಾಯತ್ ಅಧಿಕಾರಿಗಳ ಬಳಿ ತೆರಳಿ ತಾವು ಹಿಡಿದ ನಾಯಿಗಳನ್ನು ಬೇರೆಡೆ ಸ್ಥಳಾಂತರಿಸಲು ಒತ್ತಾಯಿಸಿದರು.
ಮಾಂಸ ಮಾರಾಟಗಾರರು ತ್ಯಾಜ್ಯವನ್ನು ಪಟ್ಟಣದ ಕುಂಬಾರಗಟ್ಟಿ ಹಳ್ಳದ ಬಳಿ ಹಾಕುತ್ತಿರುವುದಕ್ಕೆ ಪಪಂ ಮುಖ್ಯಾಧಿಕಾರಿ ಶೋಭಾ ಅವರ ಬಳಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ ಶೋಭಾ, ನಾಯಿಗಳನ್ನು ಹಿಡಿಯವ ಕೆಲಸ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಅರಣ್ಯ ಇಲಾಖೆಯವರ ಮಾಡಬೇಕು. ನೀವು ಅರ್ಜಿ ನೀಡಿ ನಾವು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ನಾಯಿಗಳನ್ನು ಹಿಡಿಯುವಂತೆ ಕೋರುತ್ತೇವೆ ಎಂದರು. ಆಗ ಆಕ್ರೋಶಗೊಂಡ ಕುರುಬಗೇರಿಯ ನಿವಾಸಿಗಳು ಹಾಗಿದ್ದರೇ ಪಟ್ಟಣ ಪಂಚಾಯತಿ ನಮಗೇಕೆಬೇಕು? ಹಂದಿಗಳನ್ನು ಹಿಡಿಯಲು ಆಗುತ್ತದೆ, ನಾಯಿಗಳನ್ನು ಹಿಡಿಯಲು ಆಗಲ್ಲವೆ ಎಂದು ಪ್ರಶ್ನಿಸಿದರು. ಅದಕ್ಕೆ ಕಾನೂನು ಇದೆ. ಹಾಗೆಲ್ಲ ನಾಯಿಗಳನ್ನು ಹಿಡಿಯಲು ಪಂಚಾಯಿತಿಗೆ ಅಧಿಕಾರ ಇಲ್ಲ ಎಂದು ಮುಖ್ಯಾಧಿಕಾರಿ ವಿವರಿಸಿದರು. ಅವರ ಮಾತಿಗೆ ಒಪ್ಪದ ಕುರುಬಗೇರಿ ನಿವಾಸಿಗಳು, ವಾಗ್ವಾದ ಮುಂದುವರಿಸಿದರು. ಮಧ್ಯ ಪ್ರವೇಶಿಸಿದ ಕುರುಬಗೇರಿ ವಾರ್ಡ್ ಸದಸ್ಯ ಕೋಟೆಪ್ಪ ಬನ್ನಿಮಟ್ಟಿ, ನಿವಾಸಿಗಳನ್ನು ಸಮಾಧಾನ ಪಡಿಸಿ ನೀವು ಹಿಡಿದ ನಾಯಿಗಳನ್ನು ಪಟ್ಟಣದಿಂದ ಹೊರಗಡೆ ಸುರಕ್ಷಿತವಾಗಿ ಬಿಟ್ಟು ಬರುವ ಬಗ್ಗೆ ಈಗಲೇ ಕ್ರಮ ವಹಿಸುವೆ ಎಂದು ಭರವಸೆ ನೀಡಿ, ಬೋನಿನಲ್ಲಿದ್ದ ನಾಯಿಗಳನ್ನು ಪಟ್ಟಣದ ಹೊರಗಡೆ ಬಿಟ್ಟು ಬರಲಾಯಿತು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಲಿಂಗರಾಜ ನಾಯಕ, ಪಪಂ ಸದಸ್ಯರಾದ ಲಿಂಗೇಶ ಬೆನ್ನೂರ, ಪ್ರಕಾಶ ಪಠಾಡೆ, ನಿವಾಸಿಗಳಾದ ನಾಗಪ್ಪ ಅಳಲಗೇರಿ, ನಾಗಪ್ಪ ಬಸಾಪುರ, ಶಿವಪ್ಪ ನೆಗಳೂರ ಸೇರಿದಂತೆ ಅನೇಕರಿದ್ದರು.