ರಬಕವಿ-ಬನಹಟ್ಟಿ: ರಾಜ್ಯ ಸರ್ಕಾರ ಅದಷ್ಟು ಬೇಗನೆ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘವು ಸರ್ಕಾರವನ್ನು ಒತ್ತಾಯಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಂಡು ಉಪನ್ಯಾಸಕರಿಗೂ ಮತ್ತು ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.
ಅವರು ಬುಧವಾರ ಸ್ಥಳೀಯ ತಹಶೀಲ್ದಾರ್ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿ ಪತ್ರಿಕೆಯ ಜೊತೆಗೆ ಮಾತನಾಡಿದರು.
ಅತಿಥಿ ಉಪನ್ಯಾಸಕರು ಡಿ.10 ರಿಂದ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇದರಿಂದಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗಿದೆ. ಪರೀಕ್ಷೆಗಳು ಹತ್ತಿರಕ್ಕೆ ಬರುತ್ತಿವೆ. ಪಠ್ಯ ಕ್ರಮವೂ ಕೂಡಾ ಇನ್ನೂ ಬಹಳಷ್ಟು ಪ್ರಮಾಣದಲ್ಲಿ ಇದೆ. ಈ ವಿಷಯವನ್ನು ಸರ್ಕಾರ ಅದಷ್ಟು ಗಂಭೀರವಾಗಿ ಪರಿಗಣಿಸಿ ಅತಿಥಿ ಉಪನ್ಯಾಸಕರ ಬೇಡಿಕೆಗಳಗೆ ಸ್ಪಂದಿಸಬೇಕು. ಅದೇ ರೀತಿಯಾಗಿ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರ ಕುರಿತು ಹಗುರವಾಗಿ ಮಾತನಾಡಿರುವುದನ್ನು ನಾವು ಖಂಡಿಸುತ್ತೇವೆ ಎಂದು ಶಿವಲಿಂಗ ಟಿರಕಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಅತಿಥಿ ಉಪನ್ಯಾಸಕರ ಸಂಘದ ಮುಖಂಡ ರಾಜಶೇಖರ ಬೀಳಗಿ ಮಾತನಾಡಿ, ಅತಿಥಿ ಉಪನ್ಯಾಸಕರಿಗೆ ನೇಕಾರ ಸೇವಾ ಸಂಘದವರು ಬೆಂಬಲ ಸೂಚಿಸಿದ್ದು, ನಮಗೆ ಮತ್ತಷ್ಟ ಬಲ ಬಂದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಓಂಕಾರ ಯರಗಟ್ಟಿಕರ, ಎನ್.ಎಂ.ಭಜಂತ್ರಿ, ಪ್ರಭು ಚಾಂದಕವಟೆ, ಅಳ್ಳಿಮಟ್ಟಿ, ಸಂಗಮೇಶ ಗುಟ್ಲಿ ಸೇರಿದಂತೆ ಅನೇಕರು ಇದ್ದರು.