ನೆಹರೂನಗರ: ಯಕ್ಷಗಾನವನ್ನು ಕಲೆಯಾಗಿಯೇ ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಅದು ಕೇವಲ ನಾಟಕ ಅಥವಾ ಸಂಗೀತ ಆಗಬಾರದು. ಯಕ್ಷಗಾನ ಎಂಬುವುದು ಮಕ್ಕಳಾ ಟಿಕೆಯಲ್ಲ. ರಂಗಭೂಮಿಗೆ ಯಾವುದೇ ಕಾರಣಕ್ಕೂ ವಿಕೃತಿಯನ್ನು ತರುವುದು ಸರಿಯಲ್ಲ. ಯಕ್ಷಗಾನ ಎಂಬುವುದು ಸ್ವೇಚ್ಛಾಚಾರ ಆಗದಿರಲಿ, ಅದೊಂದು ಕಲಾರಾಧನೆ. ಅದರ ಪ್ರಾಮುಖ್ಯವನ್ನು ಅರಿತುಕೊಂಡು ಮುನ್ನಡೆಯಬೇಕೆಂದು ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗಾನ ಸಂಘಟಕ ಶ್ಯಾಮ ಭಟ್ ಹೇಳಿದರು.
ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಯಕ್ಷಗಾನ ಕಲಾತಂಡ ಯಕ್ಷರಂಜಿನಿ ವತಿಯಿಂದ ಕಲ್ಲೇಗ ಭಾರತ್
ಮಾತಾ ಸಮುದಾಯ ಸಭಾಭವನದಲ್ಲಿ ಆಯೋಜಿಸಿದ ‘ಗುರುವಂದನೆ ಹಾಗೂ ವಾರ್ಷಿಕೋತ್ಸವ’ ಸಮಾರಂಭದಲ್ಲಿ ಯಕ್ಷಗುರು ಸಬ್ಬಣಕೋಡಿ ರಾಮಭಟ್ ಅವರ ಕುರಿತು ಅಭಿನಂದನ ಭಾಷಣ ಮಾಡಿದರು. ಭಾರತೀಯ ಸಂಸ್ಕೃತಿಯ ಪ್ರಕಾರ ಗುರುವೆಂದರೆ ಕೇವಲ ಲೌಕಿಕ ವರ್ಗಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅದೊಂದು ಪ್ರಚಂಡ ಶಕ್ತಿ. ಆದರೆ ಲೌಕಿಕವಾದ ಯಾವುದೋ ಒಂದು ವಿದ್ಯೆಯನ್ನು ಹೇಳಿಕೊಡುವ ವ್ಯಕ್ತಿಯನ್ನು ಆ ಶಕ್ತಿಯ ಪ್ರತಿರೂಪವಾಗಿ ನಾವು ಕಾಣುತ್ತೇವೆ. ಸಾಧನೆಯ ಹಾದಿಯಲ್ಲಿ ಅನೇಕ ಕಿರುದಾರಿಗಳು ಎದುರಾಗುತ್ತವೆ. ಸರಿಯಾದ ದಾರಿ ಆಯ್ದುಕೊಳ್ಳುವಲ್ಲಿ ಸಹಕರಿಸಿ ಮುನ್ನಡೆಸುತ್ತಾ ಸಾರ್ಥಕತೆಯೆಂಬ ಕೊನೆಯನ್ನು ತೋರಿಸಬಲ್ಲವನು ಮಾತ್ರ ನಿಜವಾದ ಗುರು ಎನಿಸಿಕೊಳ್ಳುತ್ತಾನೆ ಎಂದು ಅಭಿಪ್ರಾಯಪಟ್ಟರು.
ಯಕ್ಷರಂಜಿನಿ ತಂಡದಿಂದ ಗುರು ವಂದನೆಯನ್ನು ಸ್ವೀಕರಿಸಿದ ಯಕ್ಷಗುರು, ಶ್ರೀಪಡ್ರೆ ಚಂದು ಸ್ಮಾರಕ ಯಕ್ಷಗಾನ ಕಲಾಕೇಂದ್ರದ ನಿರ್ದೇಶಕ ಸಬ್ಬಣಕೋಡಿ ರಾಮಭಟ್ ಮಾತನಾಡಿ, ಅತಿಯಾದ ವೇಗಕ್ಕೆ ಜೋತು ಬಿದ್ದು ಯಕ್ಷಗಾನ ವೇಷಗಳ ಗಾಂಭೀರ್ಯ ಹಾಗೂ ಸೊಗಡು ಹಾಳಾಗುತ್ತಿದೆ. ಕಥೆ, ಸಂದರ್ಭ, ಸ್ವಾರಸ್ಯಗಳನ್ನು ಅರಿತುಕೊಂಡು ಪಾತ್ರಗಳು ಅಭಿನಯಿಸಿದಾಗ ಮಾತ್ರ ಮೌಲ್ಯ ಉಳಿಯುತ್ತದೆ. ನವರಸಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಅಂದ ಹೆಚ್ಚುತ್ತದೆ. ಯಕ್ಷಗಾನದ ಮೂಲ ಪರಂಪರೆಗೆ ಧಕ್ಕೆಯಾಗದಂತೆ ಈ ಚಂದದ ಕಲಾಪ್ರಕಾರವನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎಂದರು.
ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕ ಎಂ.ಟಿ. ಜಯರಾಮ ಭಟ್ ಮಾತನಾಡಿ, ಯಕ್ಷಗಾನ ದಲ್ಲಿ ವೇಷಭೂಷಣದಂತೆ ಸಂಭಾಷಣೆಗೂ ಪ್ರಾಮುಖ್ಯ ನೀಡಬೇಕಾ ಗಿದೆ. ಕಲಾವಿದರು ವ್ಯಕ್ತಪಡಿಸುವ ಭಾವನೆ, ಆಡುವ ಸಂಭಾಷಣೆ ಪ್ರೇಕ್ಷಕರಿಗೆ ಅರ್ಥ ಆಗುವಂತಿರಬೇಕು. ಅನರ್ಥ, ಗೊಂದಲಗಳ ಸೃಷ್ಟಿಗೆ ಕಾರಣ ಆಗ ಬಾರದು. ಪಾತ್ರಕ್ಕೆ ನ್ಯಾಯ ಒದಗಿಸುವುದೇ ಆದ್ಯ ಕರ್ತವ್ಯವಾಗಿರಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಯಾವುದೇ ವಿಷಯವನ್ನು ಕಲಿಯುವಲ್ಲಿ ಅವಸರ ಬೇಡ. ಅವಸರಿಸುವಿಕೆ ಕಲಿಕೆಯನ್ನು ಕುಂಠಿತಗೊಳಿಸುತ್ತದೆ. ಮೊದಲು ನಾವು ಕಲಿಯಬೇಕಾದ ವಿಷಯದ ಕುರಿತು ಮನಸ್ಸನ್ನು ಸಿದ್ಧಪಡಿಸಿಕೊಳ್ಳಬೇಕು. ಆಗ ತನ್ಮಯತೆ, ಕಲಿಯುವ ಆಸಕ್ತಿ ತಾನಾಗಿಯೇ ಮೂಡುತ್ತದೆ. ಪ್ರಯತ್ನ ಕೈಬಿಡಬಾರದು. ಅದೇ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಕೈ ಹಿಡಿದು ನಮ್ಮನ್ನು ಗುರಿಯತ್ತ ಕೊಂಡೊಯ್ಯುತ್ತದೆ. ಯಶಸ್ಸಿಗಾಗಿ ಕವಲು ದಾರಿ ಹಿಡಿಯುವ ಪ್ರವೃತ್ತಿಯಿಂದ ದೂರವಾಗಬೇಕು ಎಂದರು.
ಉಪನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ ಸ್ವಾಗತಿಸಿದರು. ಯಕ್ಷರಂಜಿನಿ ಸಂಚಾಲಕ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿ, ನಿರೂಪಿಸಿದರು.