ದೊಡ್ಡಬಳ್ಳಾಪುರ: ಮಾತೃ ಭಾಷೆಯಲ್ಲಿ ಶಿಕ್ಷಣ ಒದಗಿಸುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದರೆ ಕನ್ನಡ ಮಾಧ್ಯಮ ಶಾಲೆಗಳು ಉಳಿಯಲಿವೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಪುರುಷನಹಳ್ಳಿ ಗ್ರಾಮದ ಸಿದ್ಧಗಂಗಾ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ ನಡೆದ 1997-98ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಕನ್ನಡ ಮಾಧ್ಯಮ ಶಾಲೆಗಳ ಪರಿಸ್ಥಿತಿ ಗಂಭೀರವಾಗಿದೆ. ಪೋಷಕರಾದಿ ಯಾಗಿ ಮಕ್ಕಳಲ್ಲೂ ಆಂಗ್ಲ ವ್ಯಾಮೋಹ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಶಾಲೆಗಳ ಅಸ್ತಿತ್ವ ಉಳಿಸಿಕೊಳ್ಳಲು ಗುಣಾತ್ಮಕ ಶಿಕ್ಷಣವೊಂದೇ ಪರಿಹಾರ ಮಾರ್ಗ ಎಂದರು.
ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ,ದೇಶಕ್ಕೆ ಒಳ್ಳೆಯ ಪ್ರಜೆಗಳಾಗಿ ಬದುಕು ಸಾಗಿಸಬೇಕು. ಗ್ರಾಮಾಂತರ ಪ್ರದೇಶದ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂಬ ಸದಾಶಯದಿಂದ ಪೂಜ್ಯ ಶಿವಕುಮಾರ ಶ್ರೀಗಳು ಶಾಲೆ ಆರಂಭಿಸಿದರು. ಶ್ರೀಗಳ ಕಾರುಣ್ಯ ಪಡೆದ ಗ್ರಾಮ ಪುರುಷನಹಳ್ಳಿ. ಯಾವುದೇ ಸೌಕರ್ಯ ಇಲ್ಲದ ಅವಧಿಯಲ್ಲಿ ಶಾಲೆ ಆರಂಭಿಸಿರುವುದರ ಹಿಂದೆ ಶ್ರೀಗಳ ಅಪಾರ ಶ್ರಮವಿದೆ. ಮೊದಲ ಮುಖ್ಯಶಿಕ್ಷಕರಾಗಿದ್ದ ಕೆ.ಸಿ.ಶಿವಗಂಗಯ್ಯ ಅವರು ಶಾಲೆಗೆ ಭದ್ರ ಬುನಾದಿ ಹಾಕಿದರೆ, ಎಚ್.ಎಸ್.ಬಸವರಾಜು ಅವರ ಅವಧಿಯಲ್ಲಿ ಸುವರ್ಣ ಪಥದತ್ತ ಸಾಗಿತು. ಆ ನಂತರ ಬಂದ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಪರಿಶ್ರಮದಿಂದ ಶಾಲೆಯ ಕೀರ್ತಿ ಮತ್ತಷ್ಟು ಹೆಚ್ಚಿತು ಎಂದರು.
ಆಹಾರ ಪದಾರ್ಥ ಪೂರೈಕೆ: ಸಿದ್ಧಗಂಗಾ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಿಶ್ವನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಅವಿದೇಯವಾಗಿ ವರ್ತಿಸುತ್ತಿ ರುವುದು ಬೇಸರ ತರಿಸುತ್ತದೆ. ಆದರೆ, ಇಲ್ಲಿನ ಹಳೆ ವಿದ್ಯಾರ್ಥಿಗಳ ಕಾರ್ಯ ಅಭಿನಂದನಾರ್ಹ. ಗುರುಗಳನ್ನು ಸ್ಮರಿಸಿ ಅಭಿನಂದಿಸುತ್ತಿರುವುದು ಸಂತೋಷದ ವಿಷಯ. ಸರ್ಕಾರ ಆರಂಭದಲ್ಲಿ ನೀಡಿದ 13 ಎಕರೆ ಜಮೀನಿನಲ್ಲಿ ಶಾಲೆ ಕಟ್ಟಲಾಯಿತು. ಆ ನಂತರದಲ್ಲಿ 45 ಎಕರೆ ಮಂಜೂರಾದ ಭೂಮಿಯಲ್ಲಿ ವ್ಯವಸಾಯ ಮಾಡಲಾಗುತ್ತಿದೆ. 1997-98 ನೇ ಸಾಲಿನ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯಕ್ಕೆ ಬೇಕಾದ ಆಹಾರ ಪದಾರ್ಥ ಪೂರೈಸಲು ಒಪ್ಪಿಕೊಂಡಿರುವುದು ಅಭಿನಂದನೀಯ ಎಂದರು.
ಮನವಿ ಮಾಡುತ್ತೇವೆ: ಹಳೆಯ ವಿದ್ಯಾರ್ಥಿ ಹಾಗೂ ಜೆಡಿಎಸ್ ಮುಖಂಡ ಹರೀಶ್ ಗೌಡ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳ ದಾಸೋಹಕ್ಕೆ ಅಗತ್ಯವಿರುವ ಸಾಮಗ್ರಿ ನೀಡಲು ತೀರ್ಮಾನಿಸಲಾಗಿದೆ. ಅದೇ ರೀತಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಯಾಗಿ ಪರಿವರ್ತಿಸಲು ಶ್ರೀಗಳನ್ನು ಮನವಿ ಮಾಡುತ್ತೇವೆ ಎಂದು ಹೇಳಿದರು.
ಶಾಲೆಯ ನಿವೃತ್ತ ಶಿಕ್ಷಕರು, ಸಿಬ್ಬಂದಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಜಿ.ಎಂ.ಗ್ರೂಪ್ ಅಧ್ಯಕ್ಷ ಜಿ.ಎಂ. ಲಿಂಗರಾಜು, ಸಿಆರ್‌ಸಿ ಶ್ರೀನಿವಾಸ್, ಶಾಲೆಯ ಮುಖ್ಯ ಶಿಕ್ಷಕ ಎಂ.ಪ್ರಭುದೇವರು, ಗುರುಮಲ್ಲಪ್ಪ,ಮೂರ್ತಿ ಇದ್ದರು.