Advertisement

ಗುರುಸಿದ್ದೇಶ್ವರ ರಥೋತ್ಸವ

01:00 PM Aug 22, 2017 | Team Udayavani |

ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದ ಶ್ರೀ ಗುರುಸಿದ್ದೇಶ್ವರರ ರಥೋತ್ಸವ ಶ್ರಾವಣ ಮಾಸದ ಕೊನೆಯ ಸೋಮವಾರ ಮಳೆಯ ಸಿಂಚನದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ಶ್ರೀ ಮಠದ ಆವರಣದಲ್ಲಿ ಸಂಜೆ 6:00 ಗಂಟೆ ಸುಮಾರಿಗೆ ರಥೋತ್ಸವ ಆರಂಭವಾಯಿತು. 

Advertisement

ಮಠದಿಂದ ಹೊರಟು ಸೊರಬದ ಮಠ ಗಲ್ಲಿ ವರೆಗೆ ತೆರಳಿ ಮತ್ತೆ ಶ್ರೀಮಠಕ್ಕೆ ಮರಳಿತು. ಇದಕ್ಕೂ ಮೊದಲು ಶ್ರೀಮಠದಿಂದ ಬಮ್ಮಾಪುರ ಓಣಿಯ ಗುರುಸಿದ್ದೇಶ್ವರ ಕಲ್ಯಾಣಮಂಟಪ(ಓಲಿಮಠ)ಕ್ಕೆ ಪಲ್ಲಕ್ಕಿ ಹೋಗಿ ಬಂತು. ರಥೋತ್ಸವದಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ಭಕ್ತಸಮೂಹ ಪಾಲ್ಗೊಂಡಿತು. ಗುರುಸಿದ್ದೇಶ್ವರ ಮಹಾರಾಜ ಕೀ ಜೈ, ಹರ ಹರ ಮಹಾದೇವ.. ಎಂಬ ಉದ್ಗಾರ ಮುಗಿಲು ಮುಟ್ಟಿತ್ತು.

ರಥೋತ್ಸವದ ನಂತರ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ರಜತ ಸಿಂಹಾಸನಾಧೀಶರಾದರು. ಈ ಸಂದರ್ಭದಲ್ಲಿ ಎರಡೆತ್ತಿನಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಇನ್ನಿತರರು ಇದ್ದರು. ಶ್ರೀ ಗುರುಸಿದ್ದೇಶ್ವರ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ನೂರಾರು ಭಕ್ತರು ತಂಡೋಪತಂಡವಾಗಿ ಶ್ರೀಮಠಕ್ಕೆ ಆಗಮಿಸಿ ಕತೃì ಗದ್ದುಗೆ ದರ್ಶನ ಪಡೆದರು. 

ಸಂಜೆ ನಡೆದ ರಥೋತ್ಸವದಲ್ಲಿ ಮಹಾಪೌರ ಡಿ.ಕೆ. ಚವ್ಹಾಣ, ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಮುಖಂಡರಾದ ಮಹೇಶ ಟೆಂಗಿನಕಾಯಿ, ಶಿವು ಮೆಣಸಿನಕಾಯಿ, ಅರವಿಂದ ಕುಬಸದ, ಹನುಮಂತ ಶಿಗ್ಗಾಂವಿ, ವೀರೇಶ ಸಂಗಳದ, ರಾಜು ಕೋರ್ಯಾಣಮಠ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next