Advertisement

ಮನ ತಣಿಸಿದ ಗುರು ಸಂಸ್ಮರಣೆ

12:42 PM Nov 03, 2017 | |

ವಿಜಯ ದಶ‌ಮಿಯ ಶುಭದಿನದಂದು ಗುರು ಸ್ಮರಣೆಯ ಆರಾಧನೆ ನಡೆಸಿಕೊಂಡು ಬರುತ್ತಿರುವವರು ಪುತ್ತೂರು ಸುನಾದ ಸಂಗೀತ ಕಲಾ ಶಾಲೆಯ ನಿರ್ದೇಶಕರಾದ ಗುರು ವಿ| ಕಾಂಚನ ಎ. ಈಶ್ವರ ಭಟ್‌. ಕಾಂಚನ ಗುರು ಪರಂಪರೆಯ ನೆನಪಿನಲ್ಲಿ ತಮ್ಮ ಗುರು ಕರ್ನಾಟಕ ಕಲಾಶ್ರೀ ಕಾಂಚನ ವಿ. ಸುಬ್ಬರತ್ನಂ ಇವರ ಸಂಸ್ಮರಣಾರ್ಥ ಸುನಾದ ಬಳಗದ ವಿದ್ಯಾರ್ಥಿಗಳನ್ನೊಡಗೂಡಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದಾರೆ.

Advertisement

    ವಿಜಯದಶಮಿಯಂದು ಮುಂಜಾವ ವಿದ್ಯಾಧಿದೇವತೆ ಶಾರದೆಗೆ ಸಂಗೀತ ಸೇವೆಯನ್ನು ವಿದ್ಯಾರ್ಥಿ ವೃಂದ ನಡೆಸಿಕೊಟ್ಟಿತು. ಸಂಜೆ ದಿನದ ಪ್ರಧಾನ ಅಂಗವಾಗಿ ಮೂಡಿಬಂದುದು ತ್ರಿಶೂರಿನ ವಿದ್ವಾನ್‌ ವಿ.ಆರ್‌. ದಿಲೀಪ್‌ ಕುಮಾರ್‌ ಇವರ ಗಾಯನ. ಪ್ರಸಿದ್ಧ ತೋಡಿ ರಾಗ- ಆದಿತಾಳದ ವರ್ಣ ಏರನಾಪೈಯ ಮೂಲಕ ಗಂಭೀರವಾದ ಪ್ರಸ್ತುತಿಗೆ ಮುನ್ನುಡಿ ಬರೆದ ಇವರು ಮುಂದೆ ವಿದ್ವತೂ³ರ್ಣ ಆಲಾಪನೆ ಹಾಗೂ ಕಲ್ಪನಾ ಸ್ವರ ವಿನ್ಯಾಸಗಳೊಂದಿಗೆ ಶುದ್ಧಸಾವೇರಿ ರಾಗ, ಖಂಡಛಾಪು ತಾಳದಲ್ಲಿ ತಾಯೇ ತ್ರಿಪುರ ಸುಂದರಿ ಕೃತಿಯನ್ನು ಪ್ರಸ್ತುತಪಡಿಸಿದರು. ಮುಂದೆ ಧನ್ಯಾಸಿ, ಮೋಹನ, ನಾಗಗಾಂಧಾರ ಬಹಳ ಭಾವಪೂರ್ಣವಾಗಿ ಮೂಡಿಬಂದವು.

    ಕಛೇರಿಯ ಪ್ರಧಾನ ರಾಗವಾಗಿ ಮೂಡಿ ಬಂದ ಕಲ್ಯಾಣಿ ಸಕಲ ವೈಭವಗಳೊಂದಿಗೆ ಪ್ರಸ್ತುತಗೊಂಡಿತು. ಏತವುನ್ನಾರ ಕೃತಿಯ ಜತೆಗೂಡಿದ ನೆರವಲ್‌ ಹಾಗೂ ಕಲ್ಪನಾ ಸ್ವರ ವಿನ್ಯಾಸಗಳು ಕಲಾವಿದರ ವಿದ್ವತ್‌ ಪ್ರೌಢಿಮೆಗೆ ಸಾಕ್ಷಿಯಾಯಿತು. ಅಷ್ಟೇ ಸ್ಫೂರ್ತಿಯುತವಾಗಿ ವಯಲಿನ್‌ನಲ್ಲಿ ಸಹಕರಿಸಿದವರು ಮೈಸೂರಿನ ವಿ| ಸಿ.ಎನ್‌. ತ್ಯಾಗರಾಜನ್‌. ಮೃದಂಗದಲ್ಲಿ ಸಾಥ್‌ ನೀಡಿದ ವಿ| ತುಮಕೂರು ರವಿಶಂಕರ್‌, ಮೈಸೂರು ತಮ್ಮ ಅದ್ಭುತ ನುಡಿಸಾಣಿಕೆಯಿಂದ ಕಛೇರಿಗೆ ವಿಶೇಷ ಮೆರುಗು ನೀಡಿದರು. ಕಾಪಿಯ ಜಾನಕೀ ರಮಣ, ಬೇಹಾಗ್‌ನ ಸಾರಮೈನ, ರಾಗಮಾಲಿಕೆಯಲ್ಲಿ ಬಾರೋ ಕೃಷ್ಣಯ್ಯ ಮೊದಲಾದ ದೇವರನಾಮಗಳ ಬಳಿಕ ಮಂಗಳದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ವಿ| ಕಾಂಚನ ಎ. ಈಶ್ವರ ಭಟ್‌ ದಂಪತಿ ಕಲಾವಿದರುಗಳನ್ನು ಗೌರವಿಸಿದರು. ಮನೋಜ್ಞ ವಾಗಿ ಮೂಡಿಬಂದ ಗುರು ಸಂಸ್ಮರಣೆ ಹಲವು ಕಾಲ ಜನಮಾನಸದಲ್ಲಿ ನೆಲೆಸುವಂತಿತ್ತು. 

ಮಾಲತಿ ಡಿ.

Advertisement

Udayavani is now on Telegram. Click here to join our channel and stay updated with the latest news.

Next