Advertisement

ಜನಪದ ಹಾಡಿನ ಮೋಡಿಗಾರ ಗುರುರಾಜ ಕೆಂಧೂಳಿ ಇನ್ನಿಲ್ಲ

05:33 PM Feb 27, 2023 | Team Udayavani |

ರಬಕವಿ-ಬನಹಟ್ಟಿ : ಯಾಕ ತಂಗಿ ಇಷ್ಟ್ಯಾಕ ಸೊರಗಿದಿ…, ಹೆಂಡತಿ ಅಂದರ ನಗುತಾನ… ಹೀಗೆ ಸಾವಿರಾರು ಜಾನಪದ ಗೀತೆಗಳನ್ನು ಹಾಡಿ ಲಕ್ಷಾಂತರ ಜನರ ಮನಗೆದ್ದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಖ್ಯಾತ ಗಾಯಕ ಗುರುರಾಜ ಕೆಂಧೂಳಿ(72) ಸೋಮವಾರದಂದು ನಿಧನರಾದರು. ಮೃತರು ಪತ್ನಿ ಸುಪುತ್ರ ಹಾಗೂ ಸುಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Advertisement

1951 ರಲ್ಲಿ ಬಡಕುಟುಂಬದಲ್ಲಿ ಜನಿಸಿದ ಗುರುರಾಜ ಕೆಂಧೂಳಿ ಹುಟ್ಟಿನಿಂದಲೇ ಜನಪದ ಕಲೆ ಮೈಗೂಡಿಸಿಕೊಂಡು ಬೆಳೆದವರು. ಕ್ಯಾಸೆಟ್‌ಗಳ ಕಾಲವಾಗಿದ್ದ 1985 ರಲ್ಲಿ `ಯಾಕ ತಂಗಿ ಇಷ್ಟ್ಯಾಕ ಸೊರಗಿದಿ’ ಎಂಬ ಜಾನಪದ ಗೀತೆ ರಾಜ್ಯದೆಲ್ಲೆಡೆ ಪಸರಿಸಿಕೊಂಡು ಮನೆಮಾತಾದರು. ಮರು ವರ್ಷವೇ ಹೆಂಡತಿ ಅಂದರ ನಗುತಾನ.. ಎಂಬ ಗೀತೆಯೆಂದಿಗೆ ತನ್ನ ಜನಪ್ರಿಯತೆ ಇಮ್ಮಡಿಗೊಳಿಸಿಕೊಂಡು ಸಾವಿರಾರು ಹಾಡುಗಳಿಗೆ ಸಾಕ್ಷಿಯಾಗಿದ್ದರು.

ಸುಮಾರು 150 ಕ್ಕೂ ಹೆಚ್ಚು ಜನಪದ ಹಾಗೂ ಭಕ್ತಿ ಗೀತೆಗಳನ್ನು ರಚಿಸಿ ಅವುಗಳನ್ನು ಧ್ವನಿ ಸುರಳಿಗೆ ಅಳವಡಿಸಿ ಹಾಡಿರುವ ಕೆಂಧೂಳಿ ಸುಮಾರು ಮೂರುನೂರುಕ್ಕೂ ಹೆಚ್ಚು ಧ್ವನಿ ಸುರಳಿಗಳಿಗೆ ಹಾಡಿದ್ದಾರೆ. ನಾಡಿನ ಶ್ರೇಷ್ಠ ಗಾಯಕರಾದ ಮಂಜುಳಾ ಗುರುರಾಜ, ಚಂದ್ರಿಕಾ ಗುರುರಾಜ, ಬಿ.ಆರ್.ಛಾಯಾ ಮತ್ತು ಕಸ್ತೂರಿ ಶಂಕರ ಅವರು ಗುರುರಾಜ ಕೆಂಧೂಳಿಯವರ ಕ್ಯಾಸೆಟ್‌ಗಳಿಗೆ ಹಾಡಿರುವುದು ಅಪರೂಪದ ಸಂಗತಿ.

ಗುರುರಾಜ ಕೆಂಧೂಳಿಯವರು ಹಾಡಿರುವ ಶ್ರೀಶೈಲ ಮಲ್ಲಿಕಾರ್ಜುನನ ಮೇಲಿನ ಭಕ್ತಿ ಗೀತೆಗಳು ಬಹಳಷ್ಟು ಪ್ರಸಿದ್ದಿಯನ್ನು ಪಡೆದಿವೆ. ನೆರೆಯ ಆಂಧ್ರದ ಶ್ರೀಶೈಲಕ್ಕೆ ಹೋಗಿ ಭಕ್ತಿ ಗೀತೆಗಳ ಕ್ಯಾಸೆಟ್‌ಗಳನ್ನು ಕೊಡಿ ಎಂದರೆ ಸಾಕು ಅವರು ಮೊದಲು ತಮ್ಮ ಮುಂದಿಡುವುದೇ ಕೆಂಧೂಳಿಯವರ ಕ್ಯಾಸೆಟ್‌ಗಳನ್ನು “ಮಾಡಿರೋ ಮಲ್ಲಯ್ಯನ ಧ್ಯಾನ”, “ಕಂಬಿ ಹಾಡುಗಳು”, “ಶ್ರೀಶೈಲ ಯಾತ್ರಾ ಮಾಡೋಣ ನಡಿ”, “ಮಲ್ಲಯ್ಯ ಬಂದಾನ ನಡಿ”, “ಉಘೇ ಮಲ್ಲಯ್ಯ”, “ಶ್ರೀಗಿರಿ ಮಲ್ಲಯ್ಯ” ಇಂತಹ ಹತ್ತಾರು ಅವರು ಧ್ವನಿ ಸುರಳಿಗಳು ಪ್ರಸಿದ್ಧವಾಗಿವೆ.

ಕ್ಯಾಸೆಟ್ ಯುಗದಲ್ಲಿ ಅವರ ಕ್ಯಾಸೆಟ್‌ಗಳು ಉತ್ತರಕರ್ನಾಟಕದ ಪ್ರತಿಯೊಂದು ಅಂಗಡಿಯಲ್ಲಿಯೂ ರಾರಾಜಿಸುತ್ತಿದ್ದವು. ಈಗಲೂ ಕೂಡಾ ಅವು ಸಿಡಿಗಳ ಮೂಖಾಂತರ ಮಾರಾಟವಾಗುತ್ತಿದ್ದು, ಹಳ್ಳಿಯ ಜನ ಇವರ ಕ್ಯಾಸೆಟ್ ಮತ್ತು ಸಿಡಿಗಳಿಗೋಸ್ಕರ ಮುಗಿಬೀಳುವುದು ಸರ್ವೆ ಸಾಮಾನ್ಯವಾಗಿತ್ತು. ಇಂತಹ ಕೆಂಧೂಳಿ ಇದೀಗ ಇಹಲೋಕ ತ್ಯಜಿಸಿದ್ದು, ಅಪಾರ ಸಂಖ್ಯೆ ಅಭಿಮಾನಿಗಳ ಮನದಲ್ಲಿ ನೀರವ ಮೌನ ಆವರಿಸಿದೆ.

Advertisement

ಇದನ್ನೂ ಓದಿ: ಸಚಿವ ಅಶ್ವಥ್ ನಾರಾಯಣ್ ಅವರನ್ನು ಸಂಪುಟದಿಂದ ವಜಾಗೊಳಿಸಿ; ರಕ್ಷಾ ರಾಮಯ್ಯ ಒತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next