Advertisement
ಮನೆಯಲ್ಲಿ ಕಿತ್ತು ತಿನ್ನುವ ಬಡತನವನ್ನು ಲೆಕ್ಕಿಸದೆ ಅವರು ಮಗನ ಸಾಧನೆಗೆ ಹೆಗಲಾಗಿದ್ದರು. ಈಗ ಮಗ ಅಂತಾರಾಷೀóಯ ಸಾಧಕ. ವಂಡ್ಸೆ ಸಮೀಪದ ಚಿತ್ತೂರಿನ ನಿವಾಸಿ, ವೃತ್ತಿಯಲ್ಲಿ ಪಿಕಪ್ ಚಾಲಕರಾಗಿರುವ ಮಹಾಬಲ ಪೂಜಾರಿ – ಪದ್ದು ಪೂಜಾರಿ ದಂಪತಿಯ 6 ಪುತ್ರರಲ್ಲಿ 5ನೆಯವರಾಗಿರುವ ಗುರುರಾಜ್ ಬಡತನದಿಂದ ಅರಳಿ ಬಂದ ಪ್ರತಿಭೆ. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಅಲ್ಲಿನ ಕೋಚ್ ರಾಜೇಂದ್ರ ಪ್ರಸಾದ್ ಗರಡಿಯಲ್ಲಿ ಪಳಗಿದ ಇವರು ಅಂತಾರಾಷ್ಟ್ರೀಯ ಮಟ್ಟದ ವೇಟ್ ಲಿಫ್ಟಿಂಗ್‌ನಲ್ಲಿ ಅನೇಕ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಗುರು ಸಾಧನೆಗೆ ಇತ್ತೀಚೆಗೆ ರಾಜ್ಯ ಸರಕಾರ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.
56 ಕೆಜಿ ವಿಭಾಗದಲ್ಲಿ 2016 ರಲ್ಲಿ ಮಲೇಷ್ಯಾದಲ್ಲಿ ನಡೆದ ಕಾಮನ್‌ವೆಲ್ತ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ, 2017 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ, 2016ರಲ್ಲಿ ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಇವರು, ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ 2015, 2016 ರಲ್ಲಿ ಚಿನ್ನ, 2014ರಲ್ಲಿ ಬೆಳ್ಳಿ ಪದಕ, ಅಖೀಲ ಭಾರತೀಯ ಟೂರ್ನಿಯಲ್ಲಿ 2014 ಹಾಗೂ 2015ರಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಗುರುರಾಜ್ ಅವರದು. ಚಿಕ್ಕಂದಿನಲ್ಲಿ ರಿಕ್ಷಾ ಓಡಿಸಿ ತಂದೆ ನಮ್ಮನ್ನೆಲ್ಲ ಓದಿಸಿ, ವಿದ್ಯಾವಂತರನ್ನಾಗಿಸಿ, ನಮಗೊಂದು ಬದುಕು ನೀಡಿದ್ದಾರೆ. ತಂದೆ, ತಾಯಿ ಹಾಗೂ ಮನೆಯವರ ಸಹಕಾರದಿಂದಲೇ ನಾನು ವಿಶ್ವ ಮಟ್ಟದ ಸಾಧನೆ ಮಾಡುವಂತಾಗಿದೆ ಎಂದು ಗೋಲ್ಡ್‌ಕೋಸ್ಟ್‌ನಿಂದ “ಉದಯವಾಣಿ’ಗೆ ಪ್ರತಿಕ್ರಿಯಿಸಿದರು ಗುರುರಾಜ್. ವೇಟ್ ಲಿಫ್ಟಿಂಗ್ ಸ್ಪರ್ಧೆಗಳು ಎ. 5ರಿಂದ ಆರಂಭವಾಗಲಿದ್ದು, ಒಟ್ಟು 16 ಮಂದಿ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಗುರುರಾಜ್ ಪದಕ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ.
Related Articles
ಗೋಲ್ಡ್ ಕೋಸ್ಟ್‌ನಲ್ಲಿ ವೇಟ್ ಲಿಫ್ಟಿಂಗ್ ಸ್ಪರ್ಧೆಗೆ ಎಲ್ಲ ರೀತಿಯ ಪೂರ್ವಾಭ್ಯಾಸ ನಡೆಯುತ್ತಿದೆ. ಮೊದಲು ಚಳಿ ಹೆಚ್ಚಿತ್ತು. ಭಾರತದಂತೆಯೇ ಈಗ ಸೆಕೆಯ ವಾತಾವರಣವಿದೆ. ಆಹಾರ ಕೂಡ ಈಗ ಹೊಂದಿಕೆಯಾಗುತ್ತಿದೆ. ಈ ಬಾರಿ ಪದಕ ಗೆಲ್ಲುವ ವಿಶ್ವಾಸವಿದೆ. ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ.
– ಗುರುರಾಜ್, ವೇಟ್ ಲಿಫ್ಟರ್
Advertisement
ಗೆದ್ದು ಬಾ ಮಗಚಿಕ್ಕಂದಿನಿಂದಲೂ ತುಂಬಾ ಹಠಮಾರಿ. ಎಲ್ಲದರಲ್ಲೂ ಅವನೇ ಫಸ್ಟ್ ಬರಬೇಕು ಎನ್ನುವ ಹಂಬಲ ಅವನದು. ವೇಟ್ ಲಿಫ್ಟಿಂಗ್ ಮಾತ್ರವಲ್ಲದೆ ಕುಸ್ತಿ, ಕಬಡ್ಡಿಯಲ್ಲೂ ಅನೇಕ ಪ್ರಶಸ್ತಿ ಗೆದ್ದಿದ್ದಾನೆ. ಈ ಬಾರಿಯೂ ಪದಕ ಗೆದ್ದು ತರಲಿ ಎಂದಷ್ಟೇ ಆಶೀರ್ವದಿಸುತ್ತೇನೆ. ಅವನಿಗೆ ಮನೆಯವರೆಲ್ಲರ ಬೆಂಬಲ, ಸಹಕಾರ ಯಾವಾಗಲೂ ಇರುತ್ತದೆ.
– ಮಹಾಬಲ ಪೂಜಾರಿ, (ಗುರುರಾಜ್ ತಂದೆ) ಪ್ರಶಾಂತ್ ಪಾದೆ