Advertisement

ರಾಯಚೂರು ಜನರ ದಾಹ ನೀಗಿಸಲು ಜಲಧಾರೆ

03:41 PM Jul 06, 2019 | Team Udayavani |

ರಾಯಚೂರು: ಗ್ರಾಮೀಣ ಭಾಗದಲ್ಲಿ ಬೇಸಿಗೆಯಲ್ಲಿ ಎದುರಾಗುವ ಕುಡಿತುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ 2400 ಕೋಟಿ ರೂ. ವೆಚ್ಚದಲ್ಲಿ ಜಲಧಾರೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಖಾತೆ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

Advertisement

ಯರಮರಸ್‌ ಸರ್ಕಿಟ್ ಹೌಸ್‌ನಲ್ಲಿ ಶುಕ್ರವಾರ ನಡೆದ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಾಯೋಗಿಕ ಯೋಜನೆಯಡಿ ರಾಯಚೂರು ಜಿಲ್ಲೆ ಸೇರಿದಂತೆ ವಿಜಯಪುರ, ಮಂಡ್ಯ, ಚಿತ್ರದುರ್ಗ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಹಂತ ಹಂತವಾಗಿ ಇಡೀ ರಾಜ್ಯಾದ್ಯಂತ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ಹೇಗಿರಲಿದೆ ಯೋಜನೆ?: ತುಂಗಭದ್ರಾ ಹಾಗೂ ನಾರಾಯಣಪುರ ಜಲಾಶಯಗಳನ್ನು ಅವಲಂಬಿಸಿ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಆರಂಭದಲ್ಲಿ ಇದಕ್ಕೆ ಕೇವಲ 1300 ಕೋಟಿ ರೂ. ಅಂದಾಜಿಸಲಾಗಿತ್ತು. ಸಿಂಧನೂರು ತಾಲೂಕು ಕೂಡ ಸೇರಿಸಿದ ಬಳಿಕ 2400 ಕೋಟಿ ರೂ. ಅಂದಾಜಿಸಲಾಗಿದೆ ಎಂದು ಸಚಿವ ಭೈರೇಗೌಡ ಹೇಳಿದರು.

ಜಲಧಾರೆ ಯೋಜನೆ ವ್ಯಾಪ್ತಿಯಲ್ಲಿ ಐದು ತಾಲೂಕುಗಳು ಒಳಗೊಳ್ಳಲಿದ್ದು, ಎರಡು ಜಲಾಶಯದಿಂದ ನೀರು ಪಡೆದು ನೀಡಲಾಗುವುದು. ಇದು ಬಹುಗ್ರಾಮ ಕುಡಿಯುವ ನೀರಿನ ಮಾದರಿ ಯೋಜನೆಯಾಗಿದೆ. ಬೇಸಿಗೆ ಮೂರು ತಿಂಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಜಾರಿಗೊಳಿಸಲಾಗುತ್ತಿದೆ. ಬೇಸಿಗೆಯಲ್ಲಿ ಎಲ್ಲೆಡೆ ನೀರಿನ ಕ್ಷಾಮ ಎದುರಾಗಲಿದ್ದು, ಅಂಥ ವೇಳೆ ಜಲಧಾರೆ ಯೋಜನೆ ಮೂಲಕ ನಿರಂತರ ಕುಡಿಯುವ ನೀರು ಪೂರೈಸಲಾಗುವುದು ಎಂದು ವಿವರಿಸಿದರು.

Advertisement

ನಾರಾಯಣಪುರ ಜಲಾಶಯದಿಂದ ನೀರು ಪಡೆದು ಲಿಂಗಸೂಗೂರು ತಾಲೂಕಿನಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗುವುದು. ಅಲ್ಲಿಂದ ಸಿಂಧನೂರು, ಮಾನ್ವಿಗೆ ನೀರು ಪೂರೈಸಲಾಗುವುದು. ಇನ್ನೂ ದೇವದುರ್ಗ ತಾಲೂಕಿನ ಗೂಗಲ್ ಬ್ಯಾರೇಜ್‌ ಮೂಲಕ ದೇವದುರ್ಗ ಹಾಗೂ ರಾಯಚೂರು ತಾಲೂಕಿಗೆ ನೀರು ಪೂರೈಸಲಾಗುವುದು ಎಂದು ಹೇಳಿದರು.

40 ಹಳ್ಳಿಗೆ ಒಂದು ವಲಯ: ಯೋಜನೆ ಕುರಿತು ವಿವರವಾದ ಮಾಹಿತಿ ನೀಡಿದ ಯೋಜನೆ ಜಂಟಿ ಕಾರ್ಯದರ್ಶಿ ಮನಮೋಹನ್‌, ಪ್ರತಿ ತಾಲೂಕಿನಲ್ಲಿ 40 ಹಳ್ಳಿಗಳಿಗೆ ಒಂದು ವಲಯ ಸ್ಥಾಪಿಸಲಾಗುವುದು. ಒಂದು ತಾಲೂಕಿನಲ್ಲಿ ಐದು ವಲಯ ಗುರುತಿಸಲಾಗುವುದು. ಜಿಲ್ಲೆಗೆ ಕುಡಿಯುವ ನೀರಿಗಾಗಿ ಕನಿಷ್ಠ 3 ಟಿಎಂಸಿ ಅಡಿ ನೀರು ಬೇಕಿದ್ದು, ಲಿಂಗಸೂಗೂರು ಬಳಿ ನಿರ್ಮಿಸಲಾಗುವ ನೀರಿನ ಘಟಕದಲ್ಲಿ 1.7 ಟಿಎಂಸಿ ಅಡಿ ಹಾಗೂ ಗೂಗಲ್ ಬ್ಯಾರೇಜ್‌ನಲ್ಲಿ 1.1 ಟಿಎಂಸಿ ಅಡಿ ನೀರು ಸಂಗ್ರಹಿಸುವ ಯೋಚನೆಗಳಿಗೆ. ಜಲಾಶಯದಿಂದ ನೀರು ಸಂಗ್ರಹಗಾರಕ್ಕೆ ನೀರು ಸರಬರಾಜು ಮಾಡಲು ಪ್ರತ್ಯೇಕ ಪೈಪ್‌ಲೈನ್‌ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದರು.

ಇದಕ್ಕೆ ಲಿಂಗಸೂಗುರು ಶಾಸಕ ಡಿ.ಎಸ್‌.ಹೂಲಗೇರಿ ಆಕ್ಷೇಪಿಸಿ, ಲಿಂಗಸೂಗೂರು ಬಳಿ ಪ್ರತ್ಯೇಕ ಪೈಪ್‌ಲೈನ್‌ ಬದಲಿಗೆ ಜಲದುರ್ಗ ಬಳಿ ನೀರು ಸಂಗ್ರಹಕ್ಕೆ ಅವಕಾಶವಿದೆ. ಅದನ್ನೇ ಬಳಸಿಕೊಳ್ಳಬಹುದು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಭೈರೇಗೌಡ, ನದಿಗೆ ನೀರು ಹರಿಸಿದರೆ ಉದ್ದೇಶಿತ ಯೋಜನೆಗೆ ಬಳಸುವುದು ಅಸಾಧ್ಯ. ನಾವು ನದಿಗೆ 2 ಟಿಎಂಸಿ ಅಡಿ ನೀರು ಹರಿಸಿದರೆ ನಮಗೆ ಸಿಗುವುದು ಕೇವಲ 1 ಟಿಎಂಸಿ ಅಡಿ. ಹೀಗಾಗಿ ಅದು ಕಷ್ಟದ ಕೆಲಸ ಎಂದು ಹೇಳಿದರು.

ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಮಾತನಾಡಿ, ಹೇಗಿದ್ದರೂ ಆರ್‌ಟಿಪಿಎಸ್‌, ನಗರಕ್ಕೆ ನೀರು ಪೂರೈಸಲು ಗುರ್ಜಾಪುರ ಬ್ಯಾರೇಜ್‌ ನಿರ್ಮಿಸಲಾಗಿದೆ. ಅದನ್ನೇ ಈ ಯೋಜನೆ ಬಳಸಿಕೊಳ್ಳಿ ಎಂದು ತಾಕೀತು ಮಾಡಿದರು.

ಈ ಬಗ್ಗೆ ನಮ್ಮ ಇಂಜಿನಿಯರ್‌ಗಳು ಪರಿಶೀಲಿಸಿ ಸೂಕ್ತ ಎನಿಸಿದರೆ ಪರಿಶೀಲಿಸುವರು ಎಂದು ಸಚಿವ ಭೈರೇಗೌಡ ಹೇಳಿದರು.

ಪಶುಸಂಗೋಪನೆ ಮತ್ತು ಮೀನುಗಾರಿಕೆ ಖಾತೆ ಸಚಿವ ವೆಂಕಟರಾವ್‌ ನಾಡಗೌಡ ಮಾತನಾಡಿ, ಗ್ರಾಮಗಳಿಗೆ ನೀರು ತಲುಪಿಸುತ್ತಿರೋ ಅಥವಾ ಪ್ರತಿ ಮನೆಗಳಿಗೂ ನೀರು ಪೂರೈಸುವ ಉದ್ದೇಶವಿದೆಯೋ ಎಂದು ಕೇಳಿದರು.

ಈ ಯೋಜನೆ ಕೇವಲ ಒವರ್‌ ಹೆಡ್‌ ಟ್ಯಾಂಕ್‌ಗಳಿಗೆ ಮಾತ್ರ ಪೂರೈಸಲಾಗುತ್ತಿದ್ದು, ಅಲ್ಲಿಂದ ಪ್ರತಿ ಮನೆಗೆ ತಲುಪಿಸುವ ಚಿಂತನೆ ಮಾಡಿಲ್ಲ ಎಂದು ಸಚಿವ ಭೈರೇಗೌಡ ಸ್ಪಷ್ಟಪಡಿಸಿದರು.

ಶಾಸಕರಾದ ಪ್ರತಾಪಗೌಡ ಪಾಟೀಲ, ರಾಜಾ ವೆಂಕಟಪ್ಪ ನಾಯಕ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ವಿಧಾನ ಪರಿಷತ್‌ ಶಾಸಕ ಎನ್‌.ಎಸ್‌. ಭೋಸರಾಜು, ಬಸವರಾಜ ಪಾಟೀಲ ಇಟಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್‌, ಜಿಪಂ ಸಿಇಒ ನಲಿನ್‌ ಅತುಲ್, ಎಡಿಸಿ ಗೋವಿಂದರೆಡ್ಡಿ ಸೇರಿ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next