ಸಚಿನ್ ತೆಂಡುಲ್ಕರ್‌ರನ್ನು ಕ್ರಿಕೆಟ್ ದೇವರು ಎಂದು ಕರೆಯಲಾಗುತ್ತದೆ. ಇಂದು ಕೊಹ್ಲಿ, ರೋಹಿತ್, ಸ್ಟೀವ್ ಸ್ಮಿತ್‌ರಂತಹ ಆಟಗಾರರೆಲ್ಲರೂ ಸೇರಿ ಮುರಿಯುತ್ತಿರುವ ದಾಖಲೆಗಳು ಈ ಒಬ್ಬನೇ ಕ್ರಿಕೆಟಿಗನಿಗೆ ಸೇರಿದ್ದು ಎನ್ನುವುದು ಅವರ ಸಾಧನೆಯ ಮೌಲ್ಯವನ್ನು ಹೇಳುತ್ತದೆ. ಅಂತಹ ತೆಂಡುಲ್ಕರ್ 19 ವರ್ಷದ ಹಿಂದೆ ಕೆಲವು ನಿಮಿಷಗಳ ಮಟ್ಟಿಗೆ ಭೇಟಿಯಾಗಿದ್ದ, ಗುರುಪ್ರಸಾದ್ ಎಂಬ ಅಭಿಮಾನಿಯನ್ನು ತಾವಾಗಿಯೇ ನೆನಪಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಅವರನ್ನು ಭೇಟಿಯಾಗುವ ಹಂಬಲ ವ್ಯಕ್ತಪಡಿಸಿದ್ದಾರೆ. ಅದಾದ ನಂತರ ಅದುವರೆಗೆ ಅನಾಮಿಕರಾಗಿದ್ದ ಆ ಅಭಿಮಾನಿ, ರಾತ್ರೋರಾತ್ರಿ ಜನಪ್ರಿಯರಾಗಿದ್ದಾರೆ. ಅವರ ಮನೆಮುಂದೆ ಟೀವಿವಾಹಿನಿಗಳು ಸಾಲುಗಟ್ಟಿವೆ. ಈ ವೇಳೆ ರೋಚಕ ಕಥೆಯೊಂದು ತೆರೆದುಕೊಂಡಿದೆ.
ಮೊನ್ನೆ 14ನೇ ತಾರೀಕು ಸಚಿನ್ ತೆಂಡುಲ್ಕರ್ ಮಾಡಿರುವ ಟ್ವೀಟ್ ಹೀಗಿದೆ: “ಅದೊಂದು ಭೇಟಿ ಬಹಳ ಸ್ಮರಣೀಯ. ಟೆಸ್ಟ್ ಸರಣಿಯೊಂದರ ವೇಳೆ ಚೆನ್ನೈನ ತಾಜ್ ಕೊರೊಮಂಡೆಲ್ ಹೋಟೆಲ್ ಸಿಬ್ಬಂದಿ ಜೊತೆಗೆ ಚರ್ಚೆ ನಡೆಸಿದ್ದೆ. ನನ್ನ ಮೊಳಕೈ ಗಾರ್ಡ್ ಬಗ್ಗೆ ಆಗ ನಡೆಸಿದ ಚರ್ಚೆ ಪರಿಣಾಮ, ನಾನು ಗಾರ್ಡ್ ವಿನ್ಯಾಸವನ್ನೇ ಬದಲಿಸಿದ್ದೆ. ಆ ವ್ಯಕ್ತಿ ಎಲ್ಲಿದ್ದಾನೆಂಬ ಕುತೂಹಲ ನನ್ನದು. ಅವರನ್ನು ಭೇಟಿಯಾಗುವ ಉತ್ಸಾಹದಲ್ಲಿದ್ದೇನೆ. ನೆಟಿಜನ್‌ಗಳೇ ಅವರನ್ನು ಹುಡುಕಲು ಸಹಾಯ ಮಾಡುತ್ತೀರಾ?’ ಈ ಮೇಲಿನ ಟ್ವೀಟನ್ನು ನೋಡಿ ಸಾವಿರಾರು ಮಂದಿ ಕುತೂಹಲಪಟ್ಟಿದ್ದಾರೆ. ಅಂತಹ ವ್ಯಕ್ತಿ ಯಾರೆಂದು ಹುಡುಕಲು ಆರಂಭಿಸಿದ್ದಾರೆ. ಆಗ ಗುರುಪ್ರಸಾದ್ ಅವರ ಸೋದರಳಿಯ ಎನ್.ಶ್ಯಾಮಸುಂದರ್ ಎನ್ನುವವರು ಒಂದು ಟ್ವೀಟ್ ಮಾಡಿ, ಸಚಿನ್ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಅದುಹೀಗಿದೆ: “ನೀವು ಹುಡುಕುತ್ತಿರುವ ಆ ವ್ಯಕ್ತಿ ನನ್ನ ಅಂಕಲ್. ಆ ವ್ಯಕ್ತಿಯನ್ನು ನೀವು 2ನೇ ಮಹಡಿಯಲ್ಲಿ ಭೇಟಿ ಮಾಡಿದ್ದಿರಿ. ಆಗ ನೀವು ನೆಲಮಹಡಿಗೆ ಹೊರಟಿದ್ದಿರಿ. ಅವರೇ ನಿಮ್ಮ ಮೊಳಕೈ ಗಾರ್ಡ್ ಬದಲಿಸಲು ಸಲಹೆ ನೀಡಿದ್ದು. ನೀವು ಅವರಿಗೆ ಹಸ್ತಾಕ್ಷರ ನೀಡಿದ ಹಾಳೆಯನ್ನೂ ಇಲ್ಲಿ ಲಗತ್ತಿಸಿದ್ದೇನೆ’.
ಆ ರೋಚಕ ಕಥೆ: ಈ ವಿಚಾರ ಬಹಿರಂಗವಾಗುತ್ತಲೇ ಚೆನ್ನೈನ ಗುರುಪ್ರಸಾದ್ ನಿವಾಸಕ್ಕೆ ಟೀವಿಗಳುದಾಂಗುಡಿಯಿಟ್ಟು ಸರಣಿ ಸಂದರ್ಶನ ನಡೆಸಿವೆ. ಸದ್ಯ ಗುರುಪ್ರಸಾದ್ ಅವರು ಬಿಡುವಿಲ್ಲದಷ್ಟು ಕಾರ್ಯ ಮಗ್ನರಾಗಿದ್ದಾರೆ. 19 ವರ್ಷದ ಹಿಂದೆ ತೆಂಡುಲ್ಕರ್‌ರನ್ನು ಭೇಟಿ ಮಾಡಿದ್ದಾಗ ಗುರುಪ್ರಸಾದ್‌ಗೆ 27 ವರ್ಷ. ಈಗ 46 ವರ್ಷ. ಅದಾದ ನಂತರ ಹಲವು ದುರ್ಘಟನೆಗಳು ಅವರ ಜೀವನದಲ್ಲಿ ನಡೆದಿವೆ. 2003ರಲ್ಲಿ ಅವರು ತಮ್ಮ ತಂದೆತಾಯಿಯನ್ನು ಕಳೆದು ಕೊಂಡಿದ್ದಾರೆ. ಪ್ರಸ್ತುತ ಶೇರು ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ
2001ರಲ್ಲಿ ಸಚಿನ್ ತೆಂಡುಲ್ಕರ್ ತಾಜ್ ಕೊರೊಮಂಡೆಲ್ ಹೋಟೆಲ್‌ನಲ್ಲಿ ಉಳಿದು ಕೊಂಡಿದ್ದರು. ಆಗ ಗುರು 2ನೇ ಮಹಡಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು. ತೆಂಡುಲ್ಕರ್ ಕೊಠಡಿಯಿಂದ ಹೊರಬಂದ ಕೂಡಲೇ ಓಡಿ ಹೋಗಿ, ಹಸ್ತಾಕ್ಷರಕ್ಕೆ ಮನವಿ ಮಾಡಿದರು. ನಿಮ್ಮೊಂದಿಗೆ ತುಸು ಮಾತನಾಡಬಹುದೇ ಎಂದರು. ತೆಂಡುಲ್ಕರ್ ಆಯಿತು ಎಂದಾಗ ಮುಂದುವರಿದ ಗುರು, ನಿಮ್ಮ ಮೊಳಕೈ ಗಾರ್ಡ್ ವಿನ್ಯಾಸ ಬದಲಿಸಿ. ಅದೇ ನಿಮ್ಮ ಬ್ಯಾಟ್ ಚಲನೆಗೆ ಅಡ್ಡಿಯಾಗುತ್ತಿದೆ ಎಂಬ ಸಲಹೆ ನೀಡಿದರು.
ಅದು ಹೇಗೆ ಅಷ್ಟು ನಿಖರವಾಗಿ ಹೇಳುತ್ತೀರಿ ಎಂದು ಸಚಿನ್ ಮರುಪ್ರಶ್ನಿಸಿದರು. ನಾನು ನಿಮ್ಮ ಅಪ್ಪಟ ಅಭಿಮಾನಿ. ನಿಮ್ಮ ಪ್ರತಿಯೊಂದು ಚಲನೆಯನ್ನೂ ವೀಕ್ಷಿಸಿದ್ದೇನೆ. ಅದನ್ನು ನೋಡಿಯೇ ಹೇಳುತ್ತಿದ್ದೇನೆ ಎಂದರು. ಮುಂದೆ ಕೆಲವೇ ದಿನಗಳಲ್ಲಿ ತಮ್ಮ ಮೊಳಕೈ ಗಾರ್ಡ್ ವಿನ್ಯಾಸ ಬದಲಿಸಿಕೊಂಡಿದ್ದರು. ಈಗ ತೆಂಡುಲ್ಕರ್ ತನ್ನನ್ನು ಭೇಟಿ ಮಾಡಿದರೆ, ತನ್ನ ಜೀವನದಲ್ಲಿ ಅದಕ್ಕಿಂತ ಮಹತ್ವದ ಕ್ಷಣ ಇನ್ನೊಂದು ಇರಲಿಕ್ಕಿಲ್ಲ ಎಂದು ಗುರುಪ್ರಸಾದ್ ಹೇಳಿಕೊಂಡಿದ್ದಾರೆ.