Advertisement

“ಗುರುಪಾದಗಂಗೆ’ಸ್ಮರಣ ಗ್ರಂಥ ಬಿಡುಗಡೆ

12:26 PM Aug 19, 2017 | Team Udayavani |

ಭಾಲ್ಕಿ: ಕಾಯಕ ಜೀವಿಗಳು ಸಾಧನೆಯ ಮೇರು ಪರ್ವತವಾಗಿ ಸದಾ ಎಲ್ಲರ ಮನದಲ್ಲಿರುತ್ತಾರೆ. ಅಂಥವಲ್ಲಿ ಶರಣಜೀವಿ ಜಿ.ಎಚ್‌. ಶಿವಮಠರೂ ಒಬ್ಬರಾಗಿದ್ದಾರೆ ಎಂದು ಹಿರೇಮಠ ಸಂಸ್ಥಾನದ ಡಾ|ಬಸವಲಿಂಗ ಪಟ್ಟದ್ದೇವರು ಹೇಳಿದರು. ಪಟ್ಟಣದ ಚನ್ನಬಸವಾಶ್ರಮದಲ್ಲಿ ಜಿ.ಎಚ್‌. ಶಿವಮಠರ 75ನೇ ಜನ್ಮದಿನಾಚರಣೆ ನಿಮಿತ್ತ ಆಯೋಜಿಸಿದ್ದ “ಗುರುಪಾದಗಂಗೆ ಸ್ಮರಣ’ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇವರು ಕೇಂದ್ರ ಸರ್ಕಾರದ ಅಂಚೆ ಕಚೇರಿಯಲ್ಲಿ ಕಾಯಕ ನಿರ್ವಹಿಸುತ್ತ ಶರಣ ತತ್ವವನ್ನು ಜನಮಾನಸಕ್ಕೆ ಉಣಿಸುವ ಕಾರ್ಯ ಮಾಡಿದ್ದಾರೆ ಎಂದರು. ಇವರು ನಿವೃತ್ತಿ ಹೊಂದಿ ಸುಮಾರು 15 ವರ್ಷಗಳು ಸಂದಿದ್ದರೂ ಸದಾ ಜನಮಾನಸದಲ್ಲಿ ಅಂಬಲಿ ಶಿವಮಠರಾಗಿಯೇ ಉಳಿದಿದ್ದಾರೆ. ಕಾರಣ ಮನೆಗೆ ಬಂದ ಅತಿಥಿಗಳ ಹೊಟ್ಟೆ ತಣ್ಣಗಿರಲೆಂದು ಅಂಬಲಿ ಕುಡಿಸುವುದು ಇವರ ದಾಸೋಹ ಪರಂಪರೆಯಲ್ಲಿ ಒಂದಾಗಿದೆ ಎಂದು ಕೊಂಡಾಡಿದರು. ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಸನ್ನಿಧಾನ ವಹಿಸಿದ್ದರು. ಶರಣ ಚರಿತ್ರಾಮೃತ ಉಪನ್ಯಾಸ ಮಾಲಿಕೆಯಲ್ಲಿ ಬಸವಕಲ್ಯಾಣದ ಶರಣೆ ಚಿತ್ರಮ್ಮಾ ತಾಯಿ ಉಪನ್ಯಾಸ ನೀಡಿದರು. ಸಾಹಿತಿ ವೀರಣ್ಣಾ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶರಣ ಜಿ.ಎಚ್‌. ಶಿವಮಠ ಬಸವ ಗುರುಪೂಜೆ ನೆರವೇರಿಸಿದರು. ಇದೇವೇಳೆ ಗ್ರಂಥಕ್ಕೆ ಲೇಖನಗಳನ್ನು ಪೂರೈಸಿದ ಲೇಖಕರನ್ನು ಸನ್ಮಾನಿಸಲಾಯಿತು. ಸ್ಥಳೀಯ ಸಂಘ-ಸಂಸ್ಥೆಗಳ ಮುಖ್ಯಸ್ಥೆ ಉಮಾ ಪ್ರಕಾಶ ಖಂಡ್ರೆ, ಶರಣಪ್ಪ ಬಿರಾದಾರ, ರೇಖಾ ಮಹಾಜನ, ಮೋಹನರೆಡ್ಡಿ, ಶಾಂತಯ್ಯ ಸ್ವಾಮಿ, ಗಣಪತಿ ಬಾವಗೆ, ಮಲ್ಲಮ್ಮ ಆರ್‌. ಪಾಟೀಲ ಉಪಸ್ಥಿತರಿದ್ದರು. ಶಶಿಕಲಾ ಲಕ್ಷ್ಮಣ ಕಲಬುರಗಿ ಸ್ವಾಗತಿಸಿದರು. ಸಂಗಮೇಶ್ವರಿ ಸ್ವಾಮಿ ನಿರೂಪಿಸಿದರು. ಸಾಹಿತಿ ಪರಶುರಾಮ ಕರ್ಣಂ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next