ಗುರುಮಠಕಲ್: ತಾಲೂಕಿನ ಕಂದಕೂರು ಗ್ರಾಮದ ವಸತಿ ನಿಲಯ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದ್ದ 50 ಜನರ ಪೈಕಿ ಐವರಲ್ಲಿ ಎರಡ್ಮೂರು ದಿನದ ಹಿಂದೆ ಮಹಾಮಾರಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಉಳಿದವರಲ್ಲಿ ಆತಂಕ ಶುರುವಾಗಿದೆ.
ಮಹಾರಾಷ್ಟ್ರದಿಂದ ಆಗಮಿಸಿದ 50 ಜನರ ಪೈಕಿ ಕಂದಕೂರು ಎಸ್‌ಸಿ, ಎಸ್‌ಟಿ ಬಾಲಕಿಯರ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾದ 25 ಜನರಲ್ಲಿ ಮೂವರಿಗೆ ಮತ್ತು ಸರ್ಕಾರಿ ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾದ 25 ಜನರಲ್ಲಿ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಈ ಎರಡೂ ಕೇಂದ್ರಗಳ ಉಳಿದ 45 ಜನರ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ.
ಮುಂಬಯಿನ ಧಾರಾವಿ ಪ್ರದೇಶದಿಂದ ಬಂದಿದ್ದ ಕಂದಕೂರಿನ 6 ವರ್ಷದ ಮಗು (ಪಿ-1755) ಸೇರಿದಂತೆ ಪಿ-1759, ಪಿ-1762 ಹಾಗೂ ಚಿಂತನಹಳ್ಳಿ ತಾಂಡಾದ ಪಿ-1757, ಪಿ-1761 ದಂಪತಿ ಸೇರಿ ಐವರಿಗೆ ಸೋಂಕು ದೃಢಪಟ್ಟಿದೆ. ಅವರೊಂದಿಗೆ ನಾವೂ ಒಂದೇ ಕೋಣೆಯಲ್ಲಿದ್ದೆವು. ಹತ್ತು ದಿನಗಳಿಂದ ಪರೀಕ್ಷೆ ಮಾಡುವಂತೆ ಅಲವತ್ತುಕೊಂಡರೂ ಅಧಿಕಾರಿಗಳು ಸ್ಪಂದಿಸಿಲ್ಲ. ಒಂದೇ ಕೋಣೆಯಲ್ಲಿದ್ದ ನಮಗೂ ಸೋಂಕು ಹರಡಿದೆಯೇನೋ ಎನ್ನುವ ಭಯ ಕಾಡುತ್ತಿದೆ ಎನ್ನುತ್ತಾರೆ ಕ್ವಾರಂಟೈನ್ ಕೇಂದ್ರದಲ್ಲಿರುವವರು.
ಕ್ವಾರಂಟೈನ್ ಕೇಂದ್ರದಲ್ಲಿ ಊಟದ ಸಮಸ್ಯೆಯೂ ತೀವ್ರವಾಗಿತ್ತು. ಸಮಯಕ್ಕೆ ಸರಿಯಾಗು ಊಟ ಬರುತ್ತಿರಲಿಲ್ಲ. ಬೆಳಗ್ಗೆ 10 ಗಂಟೆಗೆ ಉಪಹಾರ ಬಂದರೆ, ರಾತ್ರಿ ಊಟ 9 ಗಂಟೆಗೆ ಕೊಡುತ್ತಿದ್ದರು. ಅದೂ ಕೂಡ ಒಮ್ಮೊಮ್ಮೆ ತಿನ್ನಲಾಗದೆ ಚೆಲ್ಲುವಂತಿರುತ್ತಿತ್ತು. ಈಗೀಗ ಮೂರು ದಿನಗಳಿಂದ ಉತ್ತಮ ಊಟ ಮತ್ತು ಸಮಯಕ್ಕೆ ಸರಿಯಾಗಿ ಬರುತ್ತಿದೆ ಎಂದು ಸಾಬರೆಡ್ಡಿ ಹಾಗೂ ಅಶೋಕ ತಿಳಿಸಿದರು
ನಮ್ಮ ಕೋಣೆಯಲ್ಲಿಯೇ ಇದ್ದ ಮೂವರಿಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ. ನಮಗೂ ಪರೀಕ್ಷೆ ಮಾಡುವಂತೆ ಕೋರಿದ್ದೆವು. ಬಂದು ಗಂಟಲು ದ್ರವದ ಮಾದರಿಗಳನ್ನು
ತೆಗೆದುಕೊಂಡಿದ್ದಾರೆ.
ಜಗದೀಶ,
ಕ್ವಾರಂಟೈನ್ ಕೇಂದ್ರದಲ್ಲಿರುವ ಯುವಕ.
ಕಂದಕೂರಿನ ಎರಡೂ ವಸತಿ ಶಾಲೆಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಟ್ಟವರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದೇವೆ.
ಡಾ| ಹಣಮಂತರೆಡ್ಡಿ,
ತಾಲೂಕು ವೈದ್ಯಾಧಿಕಾರಿ