Advertisement

ನಿಷೇಧವಿದ್ದರೂ ನಿಲ್ಲದ ಪ್ಲಾಸ್ಟಿಕ್‌ ಬಳಕೆ

12:25 PM Nov 17, 2019 | Naveen |

„ಚೆನ್ನಕೇಶವುಲು ಗೌಡ
ಗುರುಮಠಕಲ್‌:
ಕೇಂದ್ರ-ರಾಜ್ಯ ಸರ್ಕಾರ ಪ್ಲಾಸ್ಟಿಕ್‌ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಇನ್ನೂ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಂತಿಲ್ಲ. ಹೌದು. ಗುರುಮಠಕಲ್‌ ಪಟ್ಟಣ ಮತ್ತು ತಾಲೂಕಿನ ಗ್ರಾಮಗಳಲ್ಲಿ ಪ್ಲಾಸ್ಟಿಕ್‌ ಲೋಟ, ಚೀಲ, ಊಟದ ತಟ್ಟೆಗಳು, ಟೀ ಕಪ್‌ ಸೇರಿದಂತೆ ಮುಂತಾದ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಮತ್ತು ಮಾರಾಟ ಜೋರಾಗಿ ನಡೆಯುತ್ತಿದ್ದು ಜಿಲ್ಲಾಧಿಕಾರಿಗಳ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ.

Advertisement

ಜೋರಾದ ಪ್ಲಾಸಿಕ್‌ ಬಳಕೆ: ಪ್ಲಾಸಿಕ್‌ ಮುಕ್ತ ಭಾರತಕ್ಕಾಗಿ ಕೇಂದ್ರ-ರಾಜ್ಯ ಸರ್ಕಾರ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಅರಿವು ಮೂಡಿಸುತ್ತಿದ್ದರೂ ಗುರುಮಠಕಲ್‌ ತಾಲೂಕಿನಲ್ಲಿ ಮಾತ್ರ ಪ್ಲಾಸ್ಟಿಕ್‌ ಬಳಕೆ ಜೋರಾಗಿಯೇ ಇದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಪಟ್ಟಣದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ಈ ಕುರಿತು ಅ.2ರಂದು ಪುರಸಭೆ ಸಿಬ್ಬಂದಿ ಮತ್ತು ಸದಸ್ಯರು ಜಂಟಿಯಾಗಿ “ಪ್ಲಾಸ್ಟಿಕ್‌ ಬಳಕೆಯ ಅಂತಿಮ ಯಾತ್ರೆ’ ಎಂಬ ಅಭಿಯಾನ ಆಯೋಜಿಸಿ ಪಟ್ಟಣದ ಎಲ್ಲ ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಮನವಿಯೂ ಮಾಡಲಾಗಿತ್ತು.

ಇದರ ಪರಿಣಾಮ ಮರುದಿನದಿಂದಲೇ ಸಣ್ಣ ಕಿರಾಣಿ ಅಂಗಡಿ ಮಾಲೀಕರು, ಪಾನ್‌ಶಾಪ್‌, ಬೀದಿ ಬದಿ ವ್ಯಾಪಾರ ಮಾಡುತ್ತಿರುವ ಟಿಫಿನ್‌ ಸೆಂಟರ್‌ ಹಾಗೂ ಟೀ ಸ್ಟಾಲ್‌ ಮುಂತಾದ ಸಣ್ಣ ವ್ಯಾಪಾರಸ್ಥರು ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸಿದ್ದರು.ಆದರೆ ದೊಡ್ಡ ಕಿರಾಣಿ ಅಂಗಡಿ, ಹೋಟೆಲ್‌ ಗಳು, ಹೋಲ್‌ಸೇಲ್‌ ಬಟ್ಟೆ ಅಂಗಡಿ, ಸೂಪರ್‌ ಮಾರ್ಕೆಟ್‌, ಬೇಕರಿ ಮುಂತಾದವುಗಳಲ್ಲಿ ರಾಜಾರೋಷವಾಗಿ ಪ್ಲಾಸ್ಟಿಕ್‌ ಬಳಕೆ ಮತ್ತು ಮಾರಾಟ ಜೋರಾಗಿ ನಡೆಯುತ್ತಿದೆ. ಈ ಬಗ್ಗೆ ಪುರಸಭೆಯಲ್ಲಿ ಕೇಳಿದಾಗ ಮಾತ್ರ ಪ್ಲಾಸ್ಟಿಕ್‌ ವಶಕ್ಕೆ ಅಖಾಡಕ್ಕೆ ಇಳಿಯುತ್ತಾರೆ. ಅವರು ಅಂಗಡಿಗಳಿಗೆ ಹೋಗುವಷ್ಟರಲ್ಲಿ ಮಾಹಿತಿ ಸೋರಿಕೆಯಾಗಿ ಪುರಸಭೆ ಸಿಬ್ಬಂದಿ ಖಾಲಿ ಕೈಯಲ್ಲಿ ವಾಪಸ್ಸಾದ ನಿದರ್ಶನಗಳೂ ಇವೆ.

ಆದ್ದರಿಂದ ಜಿಲ್ಲಾಧಿಕಾರಿಗಳು, ಪುರಸಭೆ ಹಾಗೂ ಗ್ರಾಪಂ ಅಧಿಕಾರಿಗಳು ಎಚ್ಚೆತ್ತು ಪ್ಲಾಸ್ಟಿಕ್‌ ಬಳಕೆ ಹಾಗೂ ಮಾರಾಟಗಾರರಿಗೆ ಶಿಕ್ಷೆ ನೀಡಿ ಜನರಲ್ಲಿ ಅರಿವು ಮೂಡಿಸುವಲ್ಲಿ ಮುಂದಾಗಬೇಕೆನ್ನುವುದು ಪ್ರಜ್ಞಾವಂತರ ಒತ್ತಾಸೆ.

Advertisement

Udayavani is now on Telegram. Click here to join our channel and stay updated with the latest news.

Next