Advertisement

ತೀವ್ರ ಬರ: ನೀರು-ಮೇವಿಗೆ ಕುರಿಗಳ ಪರದಾಟ

12:46 PM Apr 27, 2019 | Naveen |

ಗುರುಮಠಕಲ್: ಬಿಸಿಲಿನ ತಾಪ ಹೆಚ್ಚುತ್ತಿದ್ದು, ಭೂಮಿ ಕಾದ ಕಾವಲಿಯಂತಾಗಿದೆ. ರಣ ಬಿಸಿಲಿನಿಂದಾಗಿ ಕೆಲವೆಡೆ ಜಲಮೂಲಗಳು ಬಿತ್ತಿ ಹೋಗಿವೆ. ಜಾನುವಾರುಗಳು ಕುಡಿಯುವ ನೀರು ಹಾಗೂ ಹಿಡಿ ಮೇವಿಗಾಗಿ ಪರಿತಪಿಸುತ್ತಿವೆ.

Advertisement

ಅಡವಿಯಲ್ಲಿರುವ ಮೇವು ಬಿಸಿಲಿನ ಪ್ರಕರತೆಗೆ ಒಣಗುತ್ತಿದೆ. ಹಿಂಗಾರು ಹಂಗಾಮಿಗೆ ಕಾಲುವೆಯಲ್ಲಿ ನೀರಿಲ್ಲದ ಕಾರಣ ಜಲಕ್ಷಾಮ ಉಂಟಾಗಿದೆ. ನೀರಿನ ಅಭಾವದಿಂದ ಭೂಮಿ ಕಾವು ಹೆಚ್ಚಾಗಿದೆ. ನಿತ್ಯ ಅಡವಿಯಲ್ಲಿ ಹಿಡಿ ಮೇವು ತಿನ್ನುವ ಜಾನುವಾರುಗಳಿಗೆ ಜೀವ ಜಲದ ಆಸರೆಯೂ ಇದಲ್ಲಂತಾಗಿದೆ. ತಾಲೂಕಿನಲ್ಲಿ ಮಳೆ ರೈತರ ಜತೆಗೆ ಚಲ್ಲಾಟವಾಡುತ್ತಿದೆ. ಇದರ ಪರಿಣಾಮವಾಗಿ ಜಾನುವಾರುಗಳಿಗೆ ಮೇವಿಲ್ಲದಂತಾಗಿದೆ. ಇನ್ನೂ ಕುರಿಗಳನ್ನು ಕಾಯುವ ಕುರಿಗಾರರ ಗತಿ ಅಯೋಮಯವಾಗಿದೆ. ಕುರಿ-ಮೇಕೆ ಮೇಯಿಸಲು ಬೆಳಗ್ಗೆಯಿಂದ ಸಂಜೆವರೆಗೆ ಬೆಟ್ಟ-ಗುಡ್ಡ ಸುತ್ತಿದರೂ ಎಲ್ಲಿಯೂ ಒಂದಿಷ್ಟೂ ಮೇವು ಇಲ್ಲ. ಇದರ ಜತೆಗೆ ನೀರಿನ ಅಭಾವ ಸಹ ಕಾಡುತ್ತಿದೆ. ಅಲ್ಲಲ್ಲಿ ನೀರಾವರಿ ಇರುವ ರೈತರ ಜಮೀನುಗಳಲ್ಲಿ ನೀರು ಕುಡಿಸುವುದು ಅನಿವಾರ್ಯವಾಗಿದೆ. ಮಳೆ ಬೀಳುವರೆಗೂ ನೀರು, ಮೇವು ಇಲ್ಲ. ಅಡವಿಯಲ್ಲಿ ಒಣ ಮೇವು ಇಲ್ಲ. ಕುರಿಗಾರರ ಗೋಳು ಕೇಳುವರಾರಯರು? ಮೇವು, ನೀರಿಗಾಗಿ ಪ್ರತಿನಿತ್ಯ 15-20 ಕಿಮೀ ಅಲೆದಾಡಬೇಕಾದ ಅನಿವಾರ್ಯತೆಯಿದೆ. ಆದರೆ ನೀರು ಸಿಗದೇ ಇದ್ದ ಸಂದರ್ಭದಲ್ಲಿ ಕುರಿಗಳು ಮರದ ನೆರಳಿನಲ್ಲಿ ನಿಂತು ದಣಿವಾರಿಕೆ ನೀಗಿಸಿಕೊಳ್ಳುತ್ತಿವೆ. ನೀರು ಸಿಗದಿರುವ ಕಾರಣ ಬೇಸತ್ತ ರೈತರು ಜಾನುವಾರುಗಳನ್ನು ಕೈಗೆ ಬಂದ ದುಡ್ಡಿಗೆ ಮಾರಾಟ ಮಾಡುತ್ತಿದ್ದಾರೆ. ಸದಾ ಅಲ್ಪ ಸ್ವಲ್ಪ ನೀರಿದ್ದರೂ ಕುರಿ, ಆಡು, ಮೇಕೆ, ದನ, ಕರು, ಎಮ್ಮೆ, ಎತ್ತುಗಳು ಹಳ್ಳದ ದಡದಲ್ಲಿ ನೆಲೆಯೂರಿ ತಂಪಾದ ವಾತಾವರಣದ ಆಸರೆ ಪಡೆದು ಸಂಜೆ ಮನೆಗೆ ವಾಪಸಾಗುತ್ತಿದ್ದವು. ಸದಾ ಹಳ್ಳದ ನೀರನ್ನೇ ಅವಲಂಬಿಸಿದ್ದ ಎಮ್ಮೆಗಳು ಬಿಸಿಲಿನ ಝಳಕ್ಕೆ ತತ್ತರಿಸುತ್ತಿವೆ. ಆದರೆ ನೂತನ ಗುರುಮಠಕಲ್ ತಾಲೂಕನ್ನು ಬರ ಪೀಡಿತ ಎಂದು ಘೋಷಿಸಿದರು. ಇದುವರಿಗೆ ಯಾವುದೇ ಅನುದಾನ ನೀಡಿಲ್ಲ. ಇದರಿಂದಾಗಿ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.

ಜಾನುವಾರುಗಳ ರಕ್ಷಣೆಗಾಗಿ ಪ್ರತಿಯೊಂದು ಹೋಬಳಿಗಳಲ್ಲಿ ಮೇವು ಬ್ಯಾಂಕ್‌ ಆರಂಭಿಸಬೇಕು. ಹಾಗೆಯೇ ಅದರ ಮಾಹಿತಿಯನ್ನು ರೈತರಿಗೆ ಸಲ್ಲಿಸಬೇಕು ಎಂದು ಕಂದುರಹೋಣಿ ಕುರಿಗಾಯಿ ವೆಂಕಟಪ್ಪ ಆಗ್ರಹಿಸಿದ್ದಾರೆ. ತಾಲೂಕಿನಲ್ಲಿ ಕುಡಿಯುವ ನೀರಿನ ಜಲಮೂಲಗಳು ಬತ್ತಿಹೋಗಿವೆ. ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆ ಕಾಡಿನಲ್ಲಿ ಜಲಸಂಪನ್ಮೂಲದ ವ್ಯವಸ್ಥೆ ಮಾಡಬೇಕು ಎಂದು ಯುವ ಮುಖಂಡ ರಾಜರಮೇಶ ಗೌಡ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next