Advertisement

ಪಾಳು ಬಿದ್ದ ಶೌಚಾಲಯ ಕಟ್ಟಡ

05:27 PM Jul 25, 2019 | Naveen |

ಗುರುಮಠಕಲ್: ಪಟ್ಟಣದ ವಾರ್ಡ್‌ ಸಂಖ್ಯೆ 20ರ ವ್ಯಾಪ್ತಿಯಲ್ಲಿನ ಕಟ್ಟೆಲಗೇರಿ ಬಡಾವಣೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದ್ದು, ಕಟ್ಟಡ ಕಾಮಗಾರಿ ಪೂರ್ಣಗೊಂಡು ಮೂರು ವರ್ಷ ಕಳೆಯುತ್ತಿದೆ. ಆದರೆ ಶೌಚಾಲಯದ ಸೂಕ್ತ ನಿರ್ವಹಣೆ ಇಲ್ಲದೆ ಸಾರ್ವಜನಿಕ ಉಪಯೋಗಕ್ಕೆ ಬಾರದಿರುವುದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಕಟ್ಟೆಲಗೇರಿಯಲ್ಲಿ ನಿರ್ಮಿಸಿಲಾದ ಶೌಚಾಲಯಕ್ಕೆ ಇಲ್ಲಿಯವರೆಗೂ ಸೂಕ್ತ ನಿರ್ವಹಣೆಯಿಲ್ಲ. ಶೌಚಾಲಯ ಬಳಕೆಗೆ ನೀರಿನ ವ್ಯವಸ್ಥೆ ಇಲ್ಲದಿರುವುದು ಶೌಚಾಲಯ ದುರ್ನಾತ ಬೀರುತ್ತಿರುವುದಕ್ಕೆ ಪ್ರಮುಖ ಕಾರಣ. ಈ ಕುರಿತು ಹಲವು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೌಚಾಲಯ ದುರ್ನಾತದಿಂದ ಆರೋಗ್ಯದ ಸಮಸ್ಯೆ, ಸೊಳ್ಳೆಗಳ ಕಾಟ ಹೆಚ್ಚಾಗಿರುವುದರಿಂದ ಸಮಸ್ಯೆ ಪರಿಹರಿಸುವಂತೆ ಪುರಸಭೆಗೆ ಮನವಿ ಮಾಡಿದ್ದೇವೆ. ಆದರೆ ಇಲ್ಲಿಯವರೆಗೂ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಕಟ್ಟೆಲಗೇರಿಯ ನಿವಾಸಿ ಬಾಬಾ ಚಿಂತಕುಂಟಿ.

ಕಟ್ಟಡ ನಿರ್ಮಿಸಿ ಅಷ್ಟೇ ಬಿಟ್ಟಿದ್ದಾರೆ. ಅದಕ್ಕೆ ಅಗತ್ಯ ಇರುವ ನೀರು ಸರಬರಾಜು ಹಾಗೂ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಕತ್ತಲು ವೇಳೆಯಲ್ಲಿ ಹೋಗಲು ಭಯವಾಗುತ್ತದೆ. ಪ್ರಮುಖವಾಗಿ ನೀರಿನ ಸರಬರಾಜು ಇಲ್ಲದಿರುವುದರಿಂದಾಗಿ ಶೌಚಾಲಯ ಕಟ್ಟಡದ ಸಮೀಪ ಹೋಗಲು ಸಾಧ್ಯವಾಗುತ್ತಿಲ್ಲ. ಈಗಲಾದರೂ ಸಂಬಂಧಿಸಿದ ಪುರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗಹರಿಸಬೇಕು ಎಂದು ಸ್ಥಳೀಯರಾದ ವೆಂಕಟಪ್ಪ ಆಗ್ರಹಿಸಿದ್ದಾರೆ.

ಶೌಚಾಲಯಕ್ಕೆ ಅಳವಡಿಸಲಾದ ಬಾಗಿಲು, ಕಿಟಕಿ ಸೇರಿದಂತೆ ಇತರೆ ವಸ್ತುಗಳನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ. ಕಟ್ಟಡದ ಒಳಗೆ ಸಂಪೂರ್ಣ ಹೊಲಸು ತುಂಬಿ ದುರ್ನಾತ ಬೀರುತ್ತಿದೆ ಎಂದು ಸ್ಥಳೀಯರಾದ ಪದ್ಮಮ್ಮ, ಆಶಮ್ಮ, ಕಾಶಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next