ಗುರುಮಠಕಲ್: ಭಾರತ ದೇಶ ಹಳ್ಳಿಗಳಿಂದ ಕೂಡಿದ್ದು, ಇಲ್ಲಿ ಎಲ್ಲಾ ವರ್ಗದ ಜನರು ಸಾಮರಸ್ಯದಿಂದ ಬಾಳುತ್ತಿದ್ದು, ಅವರ ಬದುಕಿನ ಜೊತೆಗೆ ಗ್ರಾಮೀಣ ಸೊಗಡು ಜಾನಪದ ಸಾಹಿತ್ಯದ ಜೀವಾಳವಾಗಿದೆ ಎಂದು ಚಿತ್ರದುರ್ಗ ಜಿಲ್ಲೆಯ ಹಿರಿಯ ಜಾನಪದ ಸಾಹಿತಿ ಯುಗಧರ್ಮ ರಾಮಣ್ಣ ಹೇಳಿದರು.
ಗುರಮಠಕಲ್ ಖಾಸಾ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಜಾನಪದ ಹಾಡುಗಳು ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಈ ಹಿಂದೆ ದೇಶದಲ್ಲಿ 233 ಜಾನಪದ ಕಲೆಗಳು ಇದ್ದವು. ಆದರೆ ಇಂದು ಜಾಗತೀಕರಣದ ಪ್ರಭಾವದಿಂದ 15 ಕಲೆಗಳು ಮಾತ್ರ ಉಳಿದಿವೆ ಎಂದು ವಿಷಾದ ವ್ಯಕ್ತ ಪಡಿಸಿದರು.
ವಿಶ್ವದಲ್ಲಿಯೇ ಭಾರತೀಯ ಸಂಸ್ಕೃತಿಗೆ ಉನ್ನತ ಸ್ಥಾನವಿದೆ. ಇಂದು ದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರುವುದು ಅವಶ್ಯಕವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಭಾರತೀಯ ಕಲೆ, ಸಂಸ್ಕೃತಿ ಕುರಿತು ಶಿಕ್ಷಣ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಚೀನ ಕಾಲದಲ್ಲಿ ಜನತೆ ಅನಕ್ಷರಸ್ಥರಾದರು ಅವರು ನಿಸರ್ಗದೊಂದಿಗೆ ದೈನಂದಿನ ಚಟುವಟಿಕೆಗಳಲ್ಲಿ ಬೆರೆತು ಲೋಕ ಜ್ಞಾನ ಹೊಂದುವ ಮೂಲಕ ಸ್ವಾವಲಂಬಿ ಸಾಮರಸ್ಯದ ಬದುಕು ಕಟ್ಟಿಕೊಂಡು ಜೀವನ ನಡೆಸಿ ಪರೋಪಕಾರಿ ಕೆಲಸ ಮಾಡುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಆದರೆ ಇಂದಿನ ಯುವ ಪೀಳಿಗೆ ಕೆಟ್ಟ ಹವ್ಯಾಸಗಳಿಗೆ ಬಲಿಯಾಗುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ. ಅವರನ್ನು ನಾವು ಒಳ್ಳೆಯ ಮಾರ್ಗದಲ್ಲಿ ಜೀವನ ನಡೆಸಲು ಸೂಕ್ತ ಮಾರ್ಗದರ್ಶನ ನೀಡುವುದು ಅವಶ್ಯಕವಾಗಿದೆ ಎಂದರು. ಇಂದು ದೇಶದಲ್ಲಿ ಎಲ್ಲರಿಗೂ ಅನ್ನ ನೀಡುವ ರೈತ ಸಂಕಷ್ಟದಲ್ಲಿದ್ದಾನೆ. ನಮ್ಮನ್ನಾಳುವ ಜನ ಪ್ರತಿಧಿನಿಗಳು ಮೊದಲು ರೈತರಿಗೆ ನೀರು, ವಿದ್ಯುತ್ ಹಾಗೂ ಆತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಬೇಕು. ಅಗತ್ಯಬಿದ್ದರೆ ರೈತನೆ ಸರ್ಕಾರಕ್ಕೆ ಆರ್ಥಿಕ ನೆರವು ನೀಡುವ ಸಾಮರ್ಥ್ಯ ಹೊಂದುತ್ತಾನೆ ಎಂದು ಹೇಳಿದರು.
ಜಿಲ್ಲಾ ರೋಟರಿ ಕ್ಲಬ್ ಅಧ್ಯಕ್ಷ ಸೋಮನಾಥ ಜೈನ್ ಮಾತನಾಡಿದರು. ಖಾಸ ಮಠದ ಪೀಠಾಧಿಪತಿ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.
ಶ್ರಾವಣ ಮಾಸಾಚರಣೆ ಸಮಿತಿ ಅಧ್ಯಕ್ಷ ನರಸರೆಡ್ಡಿ ಪೊಲೀಸ್ ಪಾಟೀಲ ಗಡ್ಡೆಸೂಗೂರು ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಭೀಮರೆಡ್ಡಿಗೌಡ ಕೂಡ್ಲುರ, ಶ್ರೀನಿವಾಸರೆಡ್ಡಿ ಪಾಟೀಲ ಚನ್ನೂರ, ಲಕ್ಷ್ಮೀಕಾಂತರೆಡ್ಡಿ ಪಲ್ಲಾ, ಮಲ್ಲಿಕಾರ್ಜುನರೆಡ್ಡಿ ಹತ್ತಿಕುಣಿ, ರವೀಂದ್ರರೆಡ್ಡಿ ಮಾಲಿ ಪಾಟೀಲ, ಮಲ್ಲಿಕಾರ್ಜುನ ಸತ್ಯಂಪೇಟ, ರುದ್ರುಗೌಡ ಪಾಟೀಲ, ಬಸವರಾಜಪ್ಪಗೌಡ ಚಿಕ್ಕಬೂದುರ, ಸುದೀರ ಪಾಟೀಲ, ಲಿಂಗಾನಂದ ಗೋಗಿ ಇದ್ದರು.