ಚನ್ನಕೇಶವುಲು ಗೌಡ
ಗುರುಮಠಕಲ್: ತಾಲೂಕಿನ ಚಿನ್ನಕಾರ ಗ್ರಾಪಂಗೆ ಕಳೆದ 30 ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೇ ಕೈಗಾರಿಕಾ ಇಲಾಖೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಚಿನ್ನಕಾರ ಗ್ರಾಪಂ ವ್ಯಾಪ್ತಿಯಲ್ಲಿ ಧರ್ಮಪುರ, ಧರ್ಮಪುರ ತಾಂಡಾ, ಬೆಟ್ಟದಳ್ಳಿ, ಗುಂಜನೂರ ಗ್ರಾಮಗಳಿವೆ. ಒಟ್ಟು 17 ಗ್ರಾಪಂ ಸದಸ್ಯರಿದ್ದಾರೆ. ಗ್ರಾಪಂ ಕೇಂದ್ರ ಇರುವ ಚಿನ್ನಕಾರ ಗ್ರಾಮದಲ್ಲಿ ಸುಮಾರು 5 ಸಾವಿರ ಜನಸಂಖ್ಯೆ, 4 ಅಂಗನವಾಡಿ ಕೇಂದ್ರ, 8ನೇ ತರಗತಿವರೆಗೆ ಶಾಲೆ ಇದೆ. ಆದರೆ ಗ್ರಾಪಂಗೆ ವ್ಯವಸ್ಥಿತ ಕಟ್ಟಡವಿಲ್ಲ. ಒಂದು ಕೋಣೆ ಕಟ್ಟಡದಲ್ಲಿ ಗ್ರಾಪಂ ಗ್ರಂಥಾಲಯ ಇದೆ.
ಅದು ಮಳೆಗೆ ಸೋರುತ್ತದೆ. ಸುತ್ತಲೂ ನೀರು ನಿಲ್ಲುತ್ತದೆ. ಹೆಚ್ಚು ಮಳೆಯಾದರೆ ನೀರು ಒಳಗೆ ನುಗ್ಗುತ್ತದೆ. ಇದರಲ್ಲಿ ಗ್ರಾಪಂ ಕಾರ್ಯ ಕಲಾಪ ನಡೆಸಲು ತೊಂದರೆಯಾಗುತ್ತಿದೆ.
ಗ್ರಾಪಂಗೆ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡಬೇಕು ಎನ್ನುತ್ತಾರೆ ಸದಸ್ಯರು. ಸ್ವಂತ ಕಟ್ಟಡ ಮಂಜೂರು ಮಾಡಲು ಹಲವು ಸಲ ಜಿಲ್ಲಾಧಿಕಾರಿಗಳಿಗೆ ಮತ್ತು ಸಿಇಒ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗ್ರಾಪಂ ಕಚೇರಿ ಮುಂಭಾಗದಲ್ಲಿ ಸರಕಾರದ ಅಧೀನದಲ್ಲಿರುವ 9 ಗುಂಟೆ ಖಾಲಿ ಜಾಗ ಇದೆ. ಅಲ್ಲಿ ಗ್ರಾಪಂ ಕಚೇರಿ ನಿರ್ಮಿಸಿದರೆ ಸೂಕ್ತವಾಗುತ್ತದೆ ಎಂಬುದು ಹಲವು ಸದಸ್ಯರ ಅಭಿಪ್ರಾಯ. ಆದರೆ ಇದಕ್ಕೆ ಸ್ಥಳೀಯ ಸಂಘ-ಸಂಸ್ಥೆಗಳು ಒಪ್ಪುತ್ತಿಲ್ಲ.
ಖಾಲಿ ಜಾಗದಲ್ಲಿ ಅಂಬೇಡ್ಕರ ಭವನ ನಿರ್ಮಾಣ ಮಾಡಬೇಕು ಎಂದು ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇಲ್ಲಿನ ಪಿಡಿಒ ಅವರು ವಾರದಲ್ಲಿ ಅಪರೂಪಕೊಮ್ಮೆ ಬರುವುದರಿಂದ ಪಂಚಾಯತಿ ಅನೇಕ ಕೆಲಸಗಳು ಹಾಗೆಯೇ ಉಳಿದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅದಷ್ಟು ಬೇಗ ಮೇಲಾಧಿಕಾರಿಗಳು ಚಿನ್ನಕಾರ ಗ್ರಾಪಂಗೆ ಸ್ವಂತ ಕಟ್ಟಡ ಮಂಜೂರಾಗುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.