Advertisement

ಅಂಬೇಡ್ಕರ್‌ಭವನ ಈಗ ಅನಾಥ

12:13 PM Nov 27, 2019 | Naveen |

„ಚೆನ್ನಕೇಶವುಲು ಗೌಡ
ಗುರುಮಠಕಲ್‌:
ಸುಸಜ್ಜಿತ ಕಟ್ಟಡ ನಿರ್ಮಿಸಿದ್ದರೂ ಅಂಬೇಡ್ಕರ್‌ ಭವನ ಪಾಳು ಬಿದ್ದಿದೆ. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಸಾರ್ವಜನಿಕರಿಗೆ ಉಪಯೋಗವಾದ ಉದಾಹರಣೆಯೂ ಇಲ್ಲದಂತೆ ಅನಾಥವಾಗಿದೆ. 1998ರಲ್ಲಿ ಸಮಾಜ ಕಲ್ಯಾಣ ಇಲಾಖೆಯ 5 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ 12ನೇ ವಾರ್ಡ್‌ ಹರಿಜನವಾಡದಲ್ಲಿ ಭೂ ಸೇನಾ ನಿಗಮದಿಂದ ನಿರ್ಮಿಸಲಾದ ಅಂಬೇಡ್ಕರ ಭವನ ಕಳೆದ 10 ವರ್ಷಗಳಿಂದ ನಿರುಪಯುಕ್ತವಾಗಿ ಉಳಿದಿದೆ. ಇದು ಬಾಗಿಲು ತೆರೆದದ್ದಕ್ಕಿಂತ ಮುಚ್ಚಿದ್ದೇ ಹೆಚ್ಚು. ವಿದ್ಯುತ್‌, ನೀರು, ಸ್ವಚ್ಛತೆ, ಭವನದ ಸುತ್ತ ಸಸಿಗಳು, ಸಿಸಿ ಕ್ಯಾಮೆರಗಳು ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಿ ಪುರಸಭೆ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿದರೆ ಅಕ್ರಮ ಚಟುವಟಿಕೆಗಳ ತಾಣವಾಗುವ ಬದಲು ಕಟ್ಟಡವೊಂದು ಸಾರ್ವಜನರಿಕರಿಗೆ ವರವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

Advertisement

ಸರಕಾರ ಸಾರ್ವಜನಿಕರ ಉಪಯೋಗಕ್ಕಾಗಿ ಸಮುದಾಯ ಭವನ ನಿರ್ಮಿಸಿ ಸಭೆ, ಸಮಾರಂಭ, ಮದುವೆ ಮುಂತಾದ ಕಾರ್ಯಗಳಿಗೆ ಅನುವು ಮಾಡಿಕೊಟ್ಟಿದೆ. ಆದರೆ ಸರಕಾರದ ಯೋಜನೆಗಳು ನಿರ್ಲಕ್ಷ್ಯ ಧೋರಣೆಯಿಂದ ಹೇಗೆ ಹಳ್ಳ ಹಿಡಿಯುತ್ತಿವೆ ಎನ್ನುವುದಕ್ಕೆ ಪಟ್ಟಣದ ಅಂಬೇಡ್ಕರ್‌ ಭವನದ ಸ್ಥಿತಿ ಕನ್ನಡಿಹಿಡಿದಂತಿದೆ. ಓಣಿಯಲ್ಲಿ ಬಡವರು, ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಸಣ್ಣ ಪುಟ್ಟ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಸಮಯ ಸಿಕ್ಕಾಗ ಅಧ್ಯಯನಕ್ಕೆ ಬಳಕೆ ಮಾಡಲು ಹೇಳಿ ಮಾಡಿಸಿದಂತ ವಾತಾವರಣದಲ್ಲಿ ಕಟ್ಟಡವಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ದೃಷ್ಟಿಯಾಡಿಸಿ ಕಟ್ಟಡವನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಸುಜ್ಜಿತವಾಗಿಸಿ ಕೊಟ್ಟರೆ ಸರಕಾರದ ಅನುದಾನ ಸದ್ಬಳಕೆ ಮಾಡಿದಂತಾಗುತ್ತದೆ ಎಂದು ಹರಿಜನವಾಡ ಬಡಾವಣೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next