Advertisement

ನಾದ ಮಾಂತ್ರಿಕನಿಗೆ ಗುರು ವಂದನೆ

06:14 PM Aug 29, 2019 | mahesh |

ಗುರುಕುಲ ಮಾದರಿಯಂತೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತ್ಯೇಕ ಸಂಗೀತ ಪಾಠ. ಅವರವರ ಸಾಮರ್ಥ್ಯಕ್ಕೆ ತಕ್ಕ ವಿಭಿನ್ನ ಪಾಠ-ಕಲಿಕೆಗೆ ಅವಕಾಶ. ಪ್ರಾಥಮಿಕ ಸಂಗೀತ ಪಾಠ ಕಲಿತಿರುವವರಿಗೆ ಅವರಿಗೆ ಬೇಕಾದ ಹಾಡುಗಳಿಗೆ ಅವರ ಆಲೋಚನೆಯಲ್ಲಿ ಸಂಪ್ರದಾಯಿಕ ಚೌಕಟ್ಟಿನಲ್ಲಿ ಸಂಗೀತ ಸಂಯೋಜಿಸಿಕೊಳ್ಳುವ ವಿಭಿನ್ನ ಅವಕಾಶ. ಇದು ಉಡುಪಿ ನಾದವೈಭವಂ ಸಂಗೀತ ಶಿಕ್ಷಣ ಸಂಶೋಧನಾ ಸಂಸ್ಥೆಯ ವಿಭಿನ್ನ ಸಾಧನೆ‌ಯ ನೋಟ. ಆಗಸ್ಟ್‌ 30 ರಂದು ಉಡುಪಿಯ ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ಪ್ರತಿಷ್ಠಾಪನಾ ದಿನಾಚರಣೆ ಮತ್ತು ಗುರು ವಂದನ ಕಾರ್ಯಕ್ರಮವಿದೆ.

Advertisement

40 ವರ್ಷಗಳಿಂದ 8000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಗುರು ನಾದವೈಭವಂ ಉಡುಪಿ ವಾಸುದೇವ ಭಟ್‌ ಅವರಿಂದ ಸಂಗೀತ ಕಲಿತು ಕೀರ್ತಿವಂತರಾಗಿದ್ದಾರೆ. ಆ ದಿನಗಳಲ್ಲಿ ಪಿ.ಬಿ ಶ್ರೀನಿವಾಸ್‌, ಎಸ್‌. ಜಾನಕಿ ಸೇರಿದಂತೆ ನಾಡಿನ ಹಿರಿಯ ಪ್ರಸಿದ್ಧ ಸಂಗೀತಜ್ಞರ ಒಡನಾಡಿಯಾಗಿದ್ದರು.

ಉಡುಪಿಯ ಪಿಪಿಸಿ ಸಭಾಂಗಣದಿಂದ ಪೇಟೆಗೆ ಬರುವ ಒಳದಾರಿಯಲ್ಲಿ ಗುರುಕೃಪಾದಲ್ಲಿ ಇಂದಿಗೂ ಸಂಗೀತ ನಾದೋಪಾಸನೆ ನಿರಂತರ ನಡೆಯುತ್ತಿರುವುದು ನಾದವೈಭವಂ ಸಂಗೀತ ಶಾಲೆಯ ಸಾಧನೆ. ಕರ್ನಾಟಕ ಸಂಗೀತದ ಮಹತ್ವದ ಹೆಸರು ಬಿಡಾರಂ ಕೃಷ್ಣಪ್ಪ ಅವರು. ಅವರ ಪರಮಾಪ್ತ ಶಿಷ್ಯ ವಾಸುದೇವ ಭಟ್ಟರ ಗುರು ಪಿಟೀಲು ಮಂಜುನಾಥಯ್ಯ ಅವರ ಸ್ಫೂರ್ತಿಯ ಸೆಲೆ ಈ ಪರಮ ಶಿಷ್ಯ. ಭವ್ಯ ಪರಂಪರೆಯ ಮೂರನೆ ಮಜಲು ಈ ವಾಸುದೇವ ಭಟ್ಟರು.

ಗಾಯಕ, ಲೇಖಕ, ಶಿಕ್ಷಕ, ಸಂಗೀತ ನಿರ್ದೇಶಕ, ಸಾಮಾಜಿಕ ಕಾರ್ಯಕರ್ತ ಹೀಗೆ ವಿಭಿನ್ನ ಸಾಧನೆಯ ಮುಖವುಳ್ಳ ಭಟ್ಟರು ಈ 82ರ ಹರೆಯದಲ್ಲೂ ಸಂಗೀತ ಸಂಶೋಧನಾ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ. ಶಿಷ್ಯವೃಂದದಲ್ಲಿ ಜಿಲ್ಲಾಧಿಕಾರಿಗಳಿಂದ ಹಿಡಿದು ಐ.ಎ.ಎಸ್‌ ಅಧಿಕಾರಿಗಳು ಇದ್ದಾರೆ. ಜತೆಗೆ ರಿಕ್ಷಾ ಚಾಲಕರು, ನಿವೃತರೂ ಇದ್ದಾರೆ. ಎಲ್ಲರನ್ನು ಸಮಾನ ಭಾವದಿಂದ ನೋಡುತ್ತಾ ಇಲ್ಲಿ ಕಲಿಕೆಗೆ ಅವಕಾಶ ಮಾಡಿ ಕೊಡಲಾಗುತ್ತಿದೆ.

ಕರ್ನಾಟಕ ಶಾಸ್ತ್ರೀಯ ಸಂಗೀತ, ಭಕ್ತಿ ಗೀತೆಗಳು, ಜಾನಪದ ಗೀತೆಗಳು, ಭಾವಗೀತೆಗಳಿಗೆ ತಮ್ಮ ಸ್ವತಂತ್ರ ಸಂಗೀತ ನಿರ್ದೇಶನ ನೀಡಿರುವ ಅವರು ತಮ್ಮ ತಂಡದ ನೃತ್ಯ- ಸಂಗೀತ ಕಾರ್ಯಕ್ರಮಗಳನ್ನು ದೇಶದ ಬಹುತೇಕ ಭಾಗಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಅವರು ಈಗಲೂ ಶಿಷ್ಯರೊಂದಿಗೆ ಹಾರ್ಮೋನಿಯಂನಲ್ಲಿ ಸಾಥಿಯಾದರೆ, ಹಾಡಲು ಆರಂಭಿಸಿದರೆ ಅವರ ಅನುಭವಾಮೃತವನ್ನು ಸವಿಯುವ ಅವಕಾಶ ಕಲಾಪ್ರೇಮಿಗಳಿಗೆ ತೆರೆದು ಕೊಳ್ಳುತ್ತದೆ.

Advertisement

– ಡಾ| ಶೇಖರ ಅಜೆಕಾರು

Advertisement

Udayavani is now on Telegram. Click here to join our channel and stay updated with the latest news.

Next