Advertisement

ಗುರು ತಿಪ್ಪೇರುದ್ರಸ್ವಾಮಿ ಮರಿ ಪರಿಷೆ

06:30 PM Mar 29, 2022 | Team Udayavani |

ನಾಯಕನಹಟ್ಟಿ: ಗುರು ತಿಪ್ಪೇರುದ್ರಸ್ವಾಮಿ ಮರಿ ಪರಿಷೆ (ಮರಿ ಜಾತ್ರೆ) ಸೋಮವಾರ ಸಾಂಪ್ರದಾಯಿಕ ಸಂಭ್ರಮ-ಸಡಗರದಿಂದ ನೆರವೇರಿತು. ಜಾತ್ರೆಯ ನಂತರದ ಸೋಮವಾರವನ್ನು ಮರಿ ಪರಿಷೆ ಎಂದು ಆಚರಿಸಲಾಗುತ್ತದೆ. ಜಾತ್ರೆಗೆ ಬರಲು ಸಾಧ್ಯವಾಗದ ಜನರು ಮರಿ ಪರಿಷೆಗೆ ಬಂದು ದೇವರ ದರ್ಶನ ಪಡೆಯುವುದು ವಾಡಿಕೆ. ಮಾ. 21 ರಂದು ವಿಜೃಂಭಣೆಯ ರಥೋತ್ಸವ ಜರುಗಿತ್ತು. ಈ ಹಿನ್ನೆಲೆಯಲ್ಲಿ ಮರಿ ಪರಿಷೆಗೆ ಭಾರೀ ಪ್ರಮಾಣದಲ್ಲಿ ಜನರು ಆಗಮಿಸಿದ್ದರು. ನೆರೆ ಜಿಲ್ಲೆ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಎತ್ತಿನಗಾಡಿ, ಟ್ರ್ಯಾಕ್ಟರ್, ಸರಕು ಸಾಗಾಣಿಕೆ ವಾಹನ ಸೇರಿದಂತೆ ನಾನಾ ವಾಹನಗಳಲ್ಲಿ ಆಗಮಿಸಿದ್ದರು. ಬೀಡು ಬಿಟ್ಟ ಭಕ್ತರು ಪಟ್ಟಣದ ಹೊರವಲಯಗಳಲ್ಲಿ ತಂಗಿದ್ದರು. ಸ್ಥಳದಲ್ಲಿಯೇ ಅಡುಗೆ ಮಾಡಿ ನೈವೇದ್ಯ ಅರ್ಪಿಸಿದರು.

Advertisement

ಬೆಳಗ್ಗೆಯಿಂದಲೇ ಹೊರಮಠ ಹಾಗೂ ಒಳಮಠಗಳು ಭಕ್ತರಿಂದ ತುಂಬಿತ್ತು. ಸರದಿ ಸಾಲಿನಲ್ಲಿ ನಿಂತ ಭಕ್ತರು ದೇವರ ದರ್ಶನ ಪಡೆದರು. ಹಣ್ಣು, ಕಾಯಿ, ಕೊಬ್ಬರಿ, ಅಕ್ಕಿ, ಬೇಳೆ,ಹೂವು ಸೇರಿದಂತೆ ನಾನಾ ವಸ್ತುಗಳನ್ನು ಅರ್ಪಿಸಿ ಪೂಜೆ ಸಲ್ಲಿಸಿದರು. ರಥ ಹಾಗೂ ದೇವಾಲಯಗಳ ಮುಂಭಾಗದಲ್ಲಿ ಸಾವಿರಾರು ಭಕ್ತರು ಕೊಬ್ಬರಿ ಸುಟ್ಟು ಹರಕೆ ಸಲ್ಲಿಸಿದರು.

ಪ್ರತಿ ವರ್ಷ ಮರಿ ಪರಿಷೆಯಲ್ಲಿ ಎಲೆಬೇತೂರು ಪ್ರಭಣ್ಣನವರ ಕುಟುಂಬ ಅನ್ನ ಸಂತರ್ಪಣೆ ಹಮ್ಮಿಕೊಳ್ಳುತ್ತಿತ್ತು. ಆದರೆ ಈ ಬಾರಿ ತಾಲೂಕು ಆಡಳಿತ ಕೊರೊನಾ ಹಿನ್ನೆಲೆಯಲ್ಲಿ ಇದಕ್ಕೆ ಅವಕಾಶ ನೀಡಿರಲಿಲ್ಲ. ಮರಿ ಪರಿಷೆ ನಿಮಿತ್ತ ಜಾತ್ರೆಗೆ ಆಗಮಿಸಿದ್ದ ಸಿಹಿತಿಂಡಿ, ಮಕ್ಕಳ ಆಟಿಕೆ, ದಿನಬಳಕೆ ವಸ್ತುಗಳು ಸೇರಿದಂತೆ ನಾನಾ ಅಂಗಡಿಗಳ ಮಾಲೀಕರು ಭರ್ಜರಿ ವ್ಯಾಪಾರ ನಡೆಸಿದರು. ಮರಿ ಪರಿಷೆ ಅಂಗವಾಗಿ ವಿಶೇಷ ವಾರೋತ್ಸವ ಜರುಗಿತು.

ಅಲಂಕೃತ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ದೇವಾಲಯದ ಸಾಂಪ್ರದಾಯಿಕ ವಾದ್ಯಗಳು, ನಂದೀಧ್ವಜ ಸೇರಿದಂತೆ ನಾನಾ ವಾದ್ಯಗಳು ಉತ್ಸವದಲ್ಲಿದ್ದವು. ಕಂದಾಯ ಹಾಗೂ ದೇವಾಲಯ ಸಿಬ್ಬಂದಿ ದೇವರ ದರ್ಶನ ಹಾಗೂ ಸರದಿ ಸಾಲಿನ ವ್ಯವಸ್ಥೆ  ಒದಗಿಸಿದ್ದರು. ಪೊಲೀಸ್‌ ಇಲಾಖೆ ದೇವಾಲಯ ಹಾಗೂ ಜಾತ್ರೆಯಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next