ಶಿಗ್ಗಾವಿ: ಸರ್ಕಾರಗಳು ತಮ್ಮ ಜನಪ್ರಿಯತೆಗಾಗಿ ಬೇರೆ ಬೇರೆ ಹೆಸರಿನಲ್ಲಿ ಭಾಗ್ಯದ ಯೋಜನೆಗಳ ಮೂಲಕ ರಾಜ್ಯದಲ್ಲಿ ಲಕ್ಷಾಂತರ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿದ್ದು, ಅದರ ಬದಲಾಗಿ ನೂರಾರು ಉದ್ಯೋಗ ಸೃಷ್ಟಿಸಿದರೆ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ರಾಜಸ್ವ ನೀಡಬಹುದು ಎಂದು ಚಿತ್ರದುರ್ಗ ಭೋವಿ ಗುರುಪೀಠದ ಜ| ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸಂತೆ ಮೈದಾನದ ರಂಗಮಂದಿರದಲ್ಲಿ ತಾಲೂಕು ಆಡಳಿತ, ಪುರಸಭೆ ಹಾಗೂ ತಾಲೂಕು ಭೋವಿ ಸಮಾಜದ ಆಶ್ರಯದಲ್ಲಿ ಗುರು ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಸರ್ಕಾರದ ಮರಳು ನೀತಿ ಹಾಗೂ ಗಣಿಗಾರಿಕೆ ಕಾಯಿದೆಗಳಿಂದ ಸ್ವಾವಲಂಬಿ ಮೂಲವೃತ್ತಿಯಿಂದ ಬದುಕು ನಡೆಸಿಕೊಂಡು ಹೋಗಲು ಸಂಕಷ್ಟ ಎದುರಾಗಿದೆ. ಸಮುದಾಯದ ಜನರ ಉದ್ಯೋಗಕ್ಕೆ ಕಾನೂನು ಸಂಕಷ್ಟಗಳಿಂದ ಧಕ್ಕೆ ಬಂದಿದೆ. ಬದುಕು ಕಟ್ಟಿಕೊಳ್ಳಲು ಕೆಲಸ ಅರಸಿ ಅಲೆಮಾರಿಗಳಾಗಿ ಜನ ಗುಳೆ ಹೋಗುವಂಥ ಸ್ಥಿತಿಯನ್ನು ಸರ್ಕಾರವೇ ನಿರ್ಮಾಣ ಮಾಡುತ್ತಿದೆ. ಕಲ್ಲು ಗಣಿಗಾರಿಕೆ, ಕಟ್ಟಡ ನಿರ್ಮಾಣ, ಕೆರೆಕಟ್ಟೆ ನಿರ್ಮಾಣ, ಸ್ಮಾರಕಗಳಂದತಹ ಸ್ಥಾವರಗಳನ್ನು ನಿರ್ಮಿಸಿದ ಕಾಯಕ ಪ್ರಧಾನ ಸಮುದಾಯದ ಜನರು, ಕಾಲಕ್ಕೆ ತಕ್ಕಂತೆ ತಮ್ಮ ವೃತ್ತಿಪರತೆ ಬದಲಾಯಿಸಿಕೊಳ್ಳಬೇಕು. ಸಮುದಾಯದ ಜನರಿಗೆ ಸಾಕ್ಷರತೆ ಪ್ರಮಾಣ ವೃದ್ಧಿಸಿಕೊಂಡು ಶಿಕ್ಷಿತರಾದಲ್ಲಿ ಅರ್ಥಿಕ ಸ್ವಾವಲಂಬನೆ ಸಾಧ್ಯ ಎಂದು ತಿಳಿ ಹೇಳಿದರು.
ಅಕ್ಷರ ಹಾಗೂ ಅರ್ಥಿಕ ಕ್ರಾಂತಿ ಮಾಡಿದ ಸಮುದಾಯಗಳು ಇಂದು ದೇಶವನ್ನಾಳುತ್ತಿವೆ. ದಲಿತ, ಶೋಷಿತ ಹಿಂದುಳಿದ ವರ್ಗ, ಅಸ್ಥಿರ ಸಮುದಾಯದ ಸಮಾಜೋದ್ಧಾರಕ ಅಶ್ಮೀತೆಯಾದಲ್ಲಿ; ನಾಡಿನ ವಚನ ಶರಣ ಶ್ರೇಷ್ಠ ಸಿದ್ಧರಾಮೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮ ಸಾರ್ಥಕತೆ ಕಾಣಲು ಸಾಧ್ಯ ಎಂದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಕಲ್ಲು, ಮಣ್ಣುಗಳ ಶ್ರೇ‚ಷ್ಠತೆ, ಮಹತ್ವತೆ ನಾಡಿಗೆ ಪರಿಚಯಿಸಿದ ಸಿದ್ಧರಾಮೇಶ್ವರರು; ಜ್ಞಾನ ದಾಸೋಹಿ ವಚನಕಾರರಲ್ಲಿಯೇ ಹಿರಿಯರು. ಮಾನವತೆಯಿಂದ ದೈವತ್ವದೆಡೆಗೆ ಸಾಗಿದ ಶರಣ ಸಿದ್ಧರಾಮೇಶ್ವರರು 68ಸಾವಿರಕ್ಕೂ ಅಧಿಕ ವಚನ ರೂಪಕ ಬರೆದು ಕಾಯಕ ಜೀವನದಲ್ಲಿ ತೊಡಗಿಸಿಕೊಂಡವರು. ಮುಂಬರುವ ದಿನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಿದ್ಧರಾಮೇಶ್ವರ ವಚನ ಅಧ್ಯಯನ ಪೀಠ ಸ್ಥಾಪಿಸಿ, ನಾಡಿಗೆ ಪರಿಚಯಿಸುವ ಚಿಂತನೆಯಿದೆ ಎಂದರು.
ಶಾಸಕ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆವಹಿಸಿ ಮಾತನಾಡಿ, ಶರಣರ ಬೋಧನೆಯನ್ನು ಕಾರ್ಯಸಿದ್ಧಿ ಮಾಡಿದ ಬಸವಾದಿ ಶರಣ ಶ್ರೇಷ್ಠ ವಚನಕಾರರಲ್ಲಿ ಸಿದ್ಧರಾಮೇಶ್ವರರು ಪ್ರಥಮರು. ಶ್ರೀಶೈಲ ಮಲ್ಲಿಕಾರ್ಜುನನ ವರಪುತ್ರರಾಗಿ ಸಮಾಜದ ತುಳಿತ, ಅವಮಾನಕ್ಕೆ ಒಳಗಾದವರ ಪರ ನಿಂತು ವಚನ ಸಾಹಿತ್ಯ ಶ್ರೀಮಂತಗೊಳಿಸಿದರು. ಅಂದಿನ ಕಾಲದಲ್ಲಿಯೇ ಲಿಂಗಭೇದ, ತಾರತಮ್ಯ ತಿರಸ್ಕರಿಸಿ ಸಮಾನತೆ ಪ್ರತಿಪಾದಿಸಿದ ಅವರು, ಕಾಯಕದ ಮೂಲಕ ದೇವರನ್ನು ಕಾಣಲು ಬೋಧನೆ ಮಾಡಿದರು. ಸಮಾಜದ ಜನರು ಶೈಕ್ಷಣಿಕವಾಗಿ, ಅರ್ಥಿಕವಾಗಿ ಸದೃಢರಾಗಬೇಕು. ಈ ಮೂಲಕ ಜ್ಞಾನ ಹಾಗೂ ವಿಜ್ಞಾನದ ಜೊತೆಗೆ ಸಮುದಾಯ ಸಾಗಬೇಕಿದೆ ಎಂದು ಹೇಳಿದರು.
ಪ್ರಾಧ್ಯಾಪಕ ಡಾ| ಎಂ.ಎಚ್. ಹೊಳಿಯಣ್ಣವರ ಉಪನ್ಯಾಸ ನೀಡಿದರು. ತಾಲೂಕು ಭೋವಿ ಸಮಾಜದ ಅಧ್ಯಕ್ಷ ಅರ್ಜುನ ಹಂಚಿನಮನಿ. ಉಪನ್ಯಾಸಕ ಎಚ್.ಡಿ. ದೇವಿಹೊಸೂರು, ನ್ಯಾಯವಾದಿ ಹನುಮಂತಪ್ಪ ಬಂಡಿವಡ್ಡರ, ಎಪಿಎಂಸಿ ಅಧ್ಯಕ್ಷೆ ಪ್ರೇಮಾ ಪಾಟೀಲ, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗೀಮಠ ಹಾಗೂ ಸದಸ್ಯರು ವೇದಿಕೆಯಲ್ಲಿದ್ದರು. ಕಂದಾಯ ಪುರಸಭೆ. ಶಿಕ್ಷಣ ಇಲಾಖೆ ಶಿಶು ಅಭಿವೃದ್ಧಿ ವಿವಿಧ ಅಕಾರಿಗಳು ಮತ್ತು ಸಮಾಜದ ಗಣ್ಯರು ಹಿರಿಯರು ಪಾಲ್ಗೊಂಡಿದ್ದರು.