ನಟ ಶರಣ್ ಅಭಿನಯದ “ಗುರು ಶಿಷ್ಯರು’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿರುವ “ಗುರು ಶಿಷ್ಯರು’ ಸಿನಿಮಾದ ಮೊದಲ ಹಾಡನ್ನು ಇತ್ತೀಚೆಗೆ ಚಿತ್ರತಂಡ ಬಿಡುಗಡೆ ಮಾಡಿದೆ.
1990ರ ದಶಕದ ಹಿನ್ನೆಲೆಯಲ್ಲಿ”ಗುರು ಶಿಷ್ಯರು’ ಸಿನಿಮಾದ ಕಥಾಹಂದರ ಸಾಗುತ್ತದೆ. ರೆಟ್ರೋ ಶೈಲಿಯಲ್ಲಿ ಗ್ರಾಮೀಣ ಹಿನ್ನೆಲೆಯಲ್ಲಿ ಸಾಗುವ ಚಿತ್ರದ ಕಥೆಯಲ್ಲಿ ನಾಯಕ ನಟಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಪ್ಪಟ ಅಭಿಮಾನಿಯಾಗಿರುತ್ತಾಳೆ. ಅಷ್ಟೇ ಅಲ್ಲದೆ ರವಿಚಂದ್ರನ್ ಅವರ “ಹಳ್ಳಿ ಮೇಷ್ಟ್ರು’ ಸಿನಿಮಾದಂತೆಯೇ, ನಾಯಕಿ ಹಳ್ಳಿ ಶಾಲೆಯ ಪಿ. ಟಿ ಮಾಸ್ಟರ್ ಹಿಂದೆ ಬೀಳುತ್ತಾಳಂತೆ. ಹೀಗಾಗಿ ಸಿನಿಮಾದ ಕಥಾಹಂದರಕ್ಕೆ ತಕ್ಕಂತೆ ಚಿತ್ರತಂಡ, 90ರ ದಶಕದ ರೆಟ್ರೋ ಶೈಲಿಯಲ್ಲಿಯೇ ಸಿನಿಮಾದ ಹಾಡನ್ನು ಸಂಯೋಜಿಸಿ, ಅದಕ್ಕೆ ದೃಶ್ಯರೂಪ ನೀಡಿದೆ.
ರವಿಚಂದ್ರನ್ ಅವರ ಸಿನಿಮಾಗಳ ಪ್ರಭಾವ “ಗುರು ಶಿಷ್ಯರು’ ಸಿನಿಮಾದ ಮೇಲೂ ಇರುವುದರಿಂದ, ಸಿನಿಮಾದ ಮೊದಲ ಹಾಡನ್ನು ರವಿಚಂದ್ರನ್ ಅವರಿಂದಲೇ ಚಿತ್ರತಂಡ ಬಿಡುಗಡೆ ಮಾಡಿಸಿದೆ.
“ಗುರು ಶಿಷ್ಯರು’ ಸಿನಿಮಾದ ಮೊದಲ ಹಾಡು ಬಿಡುಗಡೆಗೊಳಿಸಿ ಮಾತನಾಡಿದ ನಟ ಕಂ ನಿರ್ದೇಶಕ ಕ್ರೇಜಿಸ್ಟಾರ್ ರವಿಚಂದ್ರನ್, “ಸಿನಿಮಾದ ಹಾಡು ಮತ್ತು ಪೋಸ್ಟರ್ ನೋಡಿದಾಗ ಸಿನಿಮಾದಲ್ಲಿ ಏನೋ ಹೊಸ ವಿಷಯ ಹೇಳಲು ಹೊರಟಿರುವುದು ಕಾಣುತ್ತದೆ. ಶರಣ್ ಒಳಗೊಬ್ಬ ಅದ್ಭುತ ನಟನಿದ್ದಾನೆ. ಅವನು ಪ್ರತಿಬಾರಿ ಹೊಸ ರೂಪದಲ್ಲಿ ತೆರೆಮೇಲೆ ಬರುತ್ತಾನೆ. ಮೆಲೋಡಿಯಾಗಿ ಹಾಡು ಚೆನ್ನಾಗಿ ಮೂಡಿಬಂದಿದ್ದು, ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದರು.
“ಮೊದಲ ಬಾರಿಗೆ ಈ ಸಿನಿಮಾದ ಪಾತ್ರಕ್ಕಾಗಿ ದಪ್ಪ ಮೀಸೆ ಬಿಡಬೇಕಾಯಿತು. 90ರ ದಶಕದ ಹಿನ್ನೆಲೆಯಲ್ಲಿ ಗುರು ಮತ್ತು ಶಿಷ್ಯರ ನಡುವಿನ ಸಂಬಂಧದ ಕಥೆ ಸಿನಿಮಾದಲ್ಲಿದೆ. 90ರ ದಶಕ ಅಂದ್ರೆ ರವಿಚಂದ್ರನ್ ಅವರ ಸಿನಿಮಾಗಳ ಜಮಾನ. ಈ ಸಿನಿಮಾದಲ್ಲೂ ಅವರ ಸಿನಿಮಾದ್ದು ಒಂದು ನಂಟಿದೆ. ಈ ಹಾಡನ್ನು ಅವರೇ ರಿಲೀಸ್ ಮಾಡಿದ್ರೆ, ಸೂಕ್ತ ಎಂಬ ಕಾರಣಕ್ಕೆ ಅವರಿಂದಲೇ ಈ ಹಾಡು ರಿಲೀಸ್ ಮಾಡಿಸುವ ಯೋಚನೆಗೆ ಬಂದೆವು’ ಎಂದರು.
ನಾಯಕಿ ನಿಶ್ವಿಕಾ ನಾಯ್ಡು, ನಿರ್ದೇಶಕ ಜಡೇಶ್ ಕುಮಾರ್ ಹಂಪಿ, ನಿರ್ಮಾಪಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್, ಗೀತ ಸಾಹಿತಿ ಪುನೀತ್ ಆರ್ಯನ್ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು “ಗುರು ಶಿಷ್ಯರು’ ಸಿನಿಮಾದ ಮೊದಲ ಹಾಡು ಮತ್ತು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.