Advertisement

ಮೋದಿ ಮನ್‌ಕೀ ಬಾತ್‌ನಲ್ಲಿ ಕುಂದಾಪುರದ ಗುರುರಾಜ್‌ ಧ್ವನಿ

06:00 AM Apr 30, 2018 | |

ಕುಂದಾಪುರ: ರವಿವಾರ ಪ್ರಸಾರವಾದ ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್‌ ಆಕಾಶವಾಣಿ ಕಾರ್ಯಕ್ರಮದಲ್ಲಿ ಕಾಮನ್‌ವೆಲ್ತ್‌ ಗೇಮ್‌ನಲ್ಲಿ ರಜತ ಪದಕ ವಿಜೇತ ಕುಂದಾಪುರದ ಗುರುರಾಜ್‌ ಅವರ ಧ್ವನಿ ಕೇಳಿಸಿದ್ದಾರೆ. ಪದಕ ವಿಜೇತರನ್ನು ಪ್ರಶಂಶಿಸಿದ ಮೋದಿ ಅವರ ಮಾತಿನ ಮಧ್ಯೆ ಮೂವರು ಕ್ರೀಡಾಳುಗಳ ಮಾತನ್ನು ಕೇಳಿಸಲಾಗಿತ್ತು.

Advertisement

ಕಾರ್ಯಕ್ರಮವನ್ನು ಮೇರೇ ಪ್ಯಾರ್‌ ದೇಶ್‌ವಾಸಿಯೋ ಎಂದು ಆರಂಭಿಸಿದ ಮೋದಿ, ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್‌ ಕುರಿತೇ ಮಾತನಾಡತೊಡಗಿದರು. 71 ರಾಷ್ಟ್ರಗಳು ಭಾಗವಹಿಸಿದ್ದ ಪಂದ್ಯಾಟದಲ್ಲಿ ನಕ್ಷತ್ರಗಳಂತೆ ಬೆಳಗಿದ ಭಾರತದ ಕ್ರೀಡಾಳುಗಳು ಅಮೋಘ ಸಾಧನೆ ಮಾಡಿದ್ದಾರೆ. 

ಶೂಟಿಂಗ್‌, ವೇಟ್‌ಲಿಫ್ಟಿಂಗ್‌ ಮೊದಲಾದವುಗಳಲ್ಲಿ 26 ಚಿನ್ನ, ಬೆಳ್ಳಿ, ಕಂಚು ಎಂದು 66 ಪದಕಗಳನ್ನು ಗೆದ್ದಿದ್ದಾರೆ. ಪದಕಗಳನ್ನು ಗೆದ್ದು ಭಾರತೀಯ ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರಗೀತೆ ಮೊಳಗುತ್ತಿರುವಾಗ ಆದ ಸಂತೋಷವನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ. ನಮ್ಮ ಕ್ರೀಡಾಪಟುಗಳು ದೇಶದ ಸರ್ವ ನಾಗರಿಕರ ನಿರೀಕ್ಷೆಯಂತೆ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ಒಂದರ ಮೇಲೊಂದರಂತೆ ಪದಕಗಳನ್ನು ಗೆದ್ದು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 

ಅದೊಂದು ಸಮಯವಿತ್ತು. ಇಂದು ಯಾವ ಕ್ರೀಡಾಪಟು ಆಡುತ್ತಾರೆ ಎಂದು ನಾವು ಯೋಚಿಸುತ್ತಿದ್ದೆವು. ಆದರೆ ಇಂದು ಇಡೀ ದೇಶವೇ ಹೆಮ್ಮೆ ಪಡುವಂತಹ ವಾತಾವರಣ ನಿರ್ಮಾಣವಾಗಿದೆ. ದೇಶ ಹಾಗೂ ದೇಶದ ಜನತೆ ಹಬ್ಬವನ್ನು ಆಚರಿಸುತ್ತಿದ್ದಾರೆ. 2018ರ ಕಾಮನ್‌ವೆಲ್ತ್‌ ಕ್ರೀಡಾಕೂಟ ಭಾರತದ ಯಶಸ್ವಿ ಮೂರನೇ ಕ್ರೀಡಾಕೂಟವಾಗಿದೆ ಎಂದು ಮೋದಿ ಹೇಳಿದ್ದಾರೆ.

ಮೋದಿ ಅವರ ಮಾತಿನ ನಡುವೆ ಪದಕ ವಿಜೇತರ ಮಾತುಗಳ ಮುದ್ರಿತ ಧ್ವನಿ ಕೇಳಿಸಲಾಯಿತು. ಟೇಬಲ್‌ ಟೆನಿಸ್‌ ಪಟು ಮನಿಕಾ ಭಾತ್ರಾ ಮೊದಲು ಮಾತನಾಡಿದರೆ ಅನಂತರ ವೇಟ್‌ ಲಿಫ್ಟಿಂಗ್‌ನಲ್ಲಿ ರಜತ ಪದಕ ಗಳಿಸಿದ ಕುಂದಾಪುರದ ಗುರುರಾಜ್‌ ಮಾತನಾಡಿದರು. ಬಳಿಕ ವೇಟ್‌ ಲಿಫ್ಟಿಂಗ್‌ನ ಮೀರಾಬಾಯಿ ಚಾನು ಮಾತನಾಡಿದರು.

Advertisement

ಸಮರ್ಪಣೆ
ಗುರುರಾಜ್‌ ಮಾತನಾಡಿ, “ಕಾಮನ್‌ವೆಲ್ತ್‌ನಲ್ಲಿ ಭಾಗವಹಿಸಿ ಭಾರತದ ಪರವಾಗಿ ಮೊದಲ ಪದಕ ಗಳಿಸಿದ್ದು ನನಗೆ ಖುಷಿ ತಂದಿದೆ. ಈ ಗೆಲುವನ್ನು ನಾನು ನನ್ನ ಊರು ಕುಂದಾಪುರ, ರಾಜ್ಯ ಹಾಗೂ ದೇಶಕ್ಕೆ ಸಮರ್ಪಣೆ ಮಾಡುತ್ತಿದ್ದೇನೆ’ ಎಂದರು.
ಮನ್‌ ಕೀ ಬಾತ್‌ನಲ್ಲಿ ಧ್ವನಿ ಕೇಳಿಸಿದ ಕುರಿತು “ಉದಯವಾಣಿ’ ಜತೆ ಮಾತನಾಡಿದ ಗುರುರಾಜ್‌, ಶನಿವಾರ ರಾತ್ರಿ ಪ್ರಧಾನಿ ಕಚೇರಿಯಿಂದ ಕರೆ ಬಂತು. ಮನ್‌ ಕೀ ಬಾತ್‌ ಕುರಿತು ವಿವರಿಸಿ ಕಾಮನ್‌ವೆಲ್ತ್‌ ಪದಕ ಗಳಿಸಿದ ಕುರಿತು ನಿಮ್ಮ ಮನದ ಮಾತುಗಳನ್ನು ಹೇಳುವಿರಾ ಎಂದು ಕೇಳಿ ಯಾರದ್ದೇ ಹೆಸರುಗಳ ಉಲ್ಲೇಖ ಬೇಡ ಎಂದರು. ಅದರಂತೆ ನಾನು ಧ್ವನಿಮುದ್ರಣಕ್ಕೆ ಮಾತನಾಡಿದೆ ಎನ್ನುವ ಗುರುರಾಜ್‌ಗೆ ಪ್ರಧಾನಿ ಕಾರ್ಯಕ್ರಮದಲ್ಲಿ ಮೂವರ ನಡುವೆ ತಮ್ಮ ಧ್ವನಿ ಕೇಳಿಸಿದ್ದು ಖುಷಿ  ತಂದಿದೆ. ನಾನು ನನ್ನ ಊರಿನ ಹೆಸರನ್ನು ಹೇಳಲೇಬೇಕೆಂದುಕೊಂಡಿದ್ದೆ. ಆದರಂತೆ ಕುಂದಾಪುರದ ಹೆಸರನ್ನು ಹೇಳಿದೆ. ನನ್ನ ಗ್ರಾಮೀಣ ಬದುಕಿನಿಂದ ಬೆಳೆದು ಬಂದ ಹಿನ್ನೆಲೆಯನ್ನು ಗಮನಿಸಿ ಈ ಕಾರ್ಯಕ್ಕೆ ಆಯ್ಕೆ ಮಾಡಲಾಗಿತ್ತು ಎಂದರು.

ಕುಂದಾಪುರ ತಾಲೂಕಿನ ವಂಡ್ಸೆಯ ಚಿತ್ತೂರಿನ ಗುರುರಾಜ್‌ ಈಚೆಗೆ ಊರಿಗೆ ಬಂದಿದ್ದಾಗ ಅದ್ದೂರಿ ಸ್ವಾಗತ ದೊರೆತಿತ್ತು. ಉಡುಪಿ ಜಿಲ್ಲಾಡಳಿತ ಅವರನ್ನು ಚುನಾವಣಾ ರಾಯಭಾರಿಯನ್ನಾಗಿ ಮಾಡಿತ್ತು. ಕೊಲ್ಲೂರು ಹಾಗೂ ಉಜಿರೆ ಕಾಲೇಜಿನ ವಿದ್ಯಾರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next