ಪುತ್ತೂರು: ಜನಾಂಗ, ಮತ, ಮಠ, ರಾಜ್ಯಕ್ಕೆ ಸೀಮಿತರಾಗದ ಶ್ರೀ ರಾಘವೇಂದ್ರ ಗುರುಗಳು ವಿಶ್ವಗುರು ಎಂದು ಶ್ರೀ ಮಂತ್ರಾಲಯ ಮಠಾಧೀಶ ಸುಬುಧೇಂದ್ರ ಶ್ರೀಪಾದರು ಹೇಳಿದರು. ಪುತ್ತೂರಿನ ಕಲ್ಲಾರೆ ಶ್ರೀ ರಾಘವೇಂದ್ರ ಮಠದಲ್ಲಿ ಕಳೆದ ಏಳು ದಿನಗಳಿಂದ ನಡೆದುಕೊಂಡು ಬಂದ ಮಾಣಿಕೊತ್ಸವದ ಸಮಾರೋಪ ಸಮಾರಂಭದ ಧಾರ್ಮಿಕ ಕಾರ್ಯ ಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿದವರು ಗುರು ರಾಘವೇಂದ್ರ ಸ್ವಾಮಿಗಳು. ಎಲ್ಲ ಜಾತ್ಯತೀತ ಆಸ್ತಿಕರ ಶ್ರದ್ಧಾ ಕೇಂದ್ರ ರಾಘವೇಂದ್ರ ಶ್ರೀಗಳ ಮಂದಿರ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಎಂಬ ರಾಜ್ಯದ ಚೌಕಟ್ಟನ್ನು ಮೀರಿ ನಿಂತವರು ಅವರು. ಆದ್ದರಿಂದ ಅವರು ವಿಶ್ವಗುರುವಾಗಿ, ಜಗದ್ಗುರುವಾಗಿದ್ದಾರೆ ಎಂದರು.
ಸಂಪ್ರದಾಯ, ಆಚಾರ- ವಿಚಾರ, ಧಾರ್ಮಿಕ ಕೇಂದ್ರಗಳಿಗೆ ಅಡ್ಡಿ ಉಂಟು ಮಾಡುವ ನಾಸ್ತಿಕ ವಾದ ಆಗಾಗ ವಿಜೃಂಭಿಸುತ್ತದೆ. ಅಂದು ಒಬ್ಬ ಹಿರಣ್ಯಕಶಿಪುವಿನ ನಾಸ್ತಿಕ ವಾದವನ್ನು ಪುಟ್ಟ ಬಾಲಕ ಪ್ರಹ್ಲಾದ ಕಳೆದು, ಆಸ್ತಿಕ ವಾದವನ್ನು ಎತ್ತಿ ಹಿಡಿದ. ಅದೇ ರೀತಿ ರಾಘವೇಂದ್ರ ರಾಯರು ಪ್ರಹ್ಲಾದನ ಅವತಾರದಂತೆ ನಾಸ್ತಿಕ ವಾದವನ್ನು ತಳ್ಳಿ ಹಾಕಿದರು. ಆದ್ದರಿಂದ ಊರೂರುಗಳಲ್ಲಿ ಮಠ ಪ್ರಾರಂಭವಾಯಿತು. ಗುರುಗಳಿಗೆ ಕರೆದಲ್ಲಿಗೆ ಬರುವವರು ಎಂಬ ಬಿರುದು ಪ್ರಾಪ್ತವಾಯಿತು ಎಂದು ನೆನಪಿಸಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಮಾಣಿಕೊತ್ಸವ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈ ಮಾತನಾಡಿ, 7 ದಿನದ ಕಾರ್ಯಕ್ರಮ ಸಂತೋಷದಿಂದ ನಡೆದಿದೆ. ಏಕಕಂಠ, ಮುಕ್ತ ಸಹಕಾರದಿಂದ ಯಶಸ್ವಿಯಾಗಿದೆ. ಇದಕ್ಕೆ ಎಲ್ಲರ ಸಹಕಾರ ಕಾರಣ ಎಂದರು.
ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ, ಮಠದ ಟ್ರಸ್ಟಿಗಳಾದ ಲೋಕೇಶ್ ಹೆಗ್ಡೆ, ಗಣಪತಿ ನಾಯಕ್, ಬೆಟ್ಟ ಈಶ್ವರ ಭಟ್, ವಾಸುದೇವ ಶೆಣೈ, ಗೋಪಾಲಕೃಷ್ಣ ಭಟ್ ಸಾಮೆತ್ತಡ್ಕ ಉಪಸ್ಥಿತರಿದ್ದರು. ಮಾಜಿ ಟ್ರಸ್ಟಿ ಗಳು, ಟ್ರಸ್ಟಿ, ವಿವಿಧ ಸಮಿತಿಗಳ ಸಂಚಾಲಕ ರನ್ನು ಸಮ್ಮಾನಿಸಲಾಯಿತು. ಸಂಚಾಲಕ
ಯು. ಪೂವಪ್ಪ ಪ್ರಸ್ತಾವಿಸಿ, ಸ್ವಾಗತಿಸಿದರು. ಹರಿಣಿ ಪುತ್ತೂರಾಯ ನಿರೂಪಿಸಿದರು.
ಗುರುಗಳ ಆರಾಧನೆಯಿಂದ ಇಷ್ಟಾರ್ಥ ಸಿದ್ಧಿ
ಇಂದಿನ ಒತ್ತಡಮಯ ಜೀವನದಲ್ಲಿ ಸಮಯ, ಆರೋಗ್ಯ ಎರಡೂ ಇಲ್ಲ. ಬದುಕು ಸೂಪರ್ ಮಾರ್ಕೆಟನ್ನು ಅವಲಂಬಿಸಿದೆ. ಎಲ್ಲವೂ ಒಂದೇ ಕಡೆ ಸಿಗಬೇಕು, ಬೇರೆ ಬೇರೆ ಕಡೆ ತೆರಳಿ ಖರೀದಿ ಅಸಾಧ್ಯ ಎಂಬಂತಾಗಿದೆ. ಇಂತಹ ವ್ಯವಸ್ಥೆಗೆ ನಾವು ಒಗ್ಗಿಕೊಂಡಿದ್ದೇವೆ. ಧಾರ್ಮಿಕತೆಯಲ್ಲಿ ಇದನ್ನು ಸಮೀಕರಿಸಿ ನೋಡುವುದಾದರೆ, ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಎಲ್ಲ ಕ್ಷೇತ್ರಗಳಿಗೆ ಸಮ. ಇಲ್ಲಿ ನಮ್ಮ ಎಲ್ಲ ಇಷ್ಟಾರ್ಥವನ್ನು ಸಿದ್ಧಿಸಿಕೊಳ್ಳಬಹುದು ಎಂದು ಸುಬುಧೇಂದ್ರ ಶ್ರೀಪಾದರು ಹೇಳಿದರು.