Advertisement

ಗುರು ರಾಘವೇಂದ್ರರು ಕಲಿಯುಗದ ಕಾಮಧೇನು

09:04 AM Jan 12, 2019 | |

ಸಿರುಗುಪ್ಪ: ಗುರುರಾಯರು ಕೇವಲ ಮಂತ್ರಾಲಯದಲ್ಲಷ್ಟೇ ಅಲ್ಲ, ಅವರನ್ನು ಎಲ್ಲಿ ಭಕ್ತರು ಸ್ಮರಿಸುತ್ತಾರೋ, ನೆನೆಯುತ್ತಾರೋ ಅಲ್ಲಿ ತೇಜೋ ರೂಪದಲ್ಲಿ ಶ್ರೀರಾಘವೇಂದ್ರ ಶ್ರೀಗಳು ಭಕ್ತರನ್ನು ಅನುಗ್ರಹಿಸುವ ಕಲಿಯುಗದ ಕಾಮಧೇನುವಾಗಿದ್ದಾರೆ ಎಂದು ಮಂತ್ರಾಲಯ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಿಳಿಸಿದರು.

Advertisement

ನಗರದಲ್ಲಿ ಆಯೋಜಿಸಿದ್ದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮಂತ್ರಾಲಯದಲ್ಲಿ ಶ್ರೀರಾಘವೇಂದ್ರಸ್ವಾಮಿಗಳು ಇಂದಿಗೂ ಬೃಂದಾವನದಲ್ಲಿ ತೇಜೋ ರೂಪದಲ್ಲಿದ್ದಾರೆ. ನಿತ್ಯವೂ ಸನ್ನಿಧಾನದಲ್ಲಿ ರಾಯರನ್ನು ಪ್ರಾರ್ಥಿಸಿ ಬಂದಂತಹ ಭಕ್ತರ ಕಷ್ಟಗಳನ್ನು ಪರಿಹರಿಸಿ, ಮಾನಸಿಕ ನೆಮ್ಮದಿ ನೀಡುವ ತಾಣವಾಗಿದೆ. ಇಲ್ಲಿ ನಿತ್ಯವೂ ಸಾವಿರಾರು ಭಕ್ತರು ರಾಯರನ್ನು ಸ್ತುತಿಸಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಂಡು ಅನುಗ್ರಹ ಹೊಂದುತ್ತಿದ್ದಾರೆ. ಅಲ್ಲದೆ ವಿಶ್ವಾದ್ಯಂತ ರಾಯರ ಭಕ್ತರು ಗುರುವಾರದಂದು ಉಪವಾಸ ವ್ರತ ಆಚರಿಸಿ ರಾಯರನ್ನು ಸ್ತುತಿಸಿ ತಮ್ಮ ದುಃಖವನ್ನು ಪರಿಹರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಶ್ರೀರಾಘವೇಂದ್ರ ಸ್ವಾಮಿಗಳು ತಮ್ಮ ತಪೋಶಕ್ತಿಯಿಂದ ಆದೋನಿ ನವಾಬ ಸಿದ್ದಿಮಸಿಖಾನ್‌ ಅವರಿಂದ ಮಂತ್ರಾಲಯ ಗ್ರಾಮವನ್ನು ಪಡೆದರು. ಆದರೆ ಮಂತ್ರಾಲಯ ಗ್ರಾಮವು ಕೈತಪ್ಪಿದಾಗ ಅಂದಿನ ಪೀಠಾಧಿಪತಿಗಳಾಗಿದ್ದ ಶ್ರೀ ವಸುಧೇಂದ್ರತೀರ್ಥರು ಮರಳಿ ಮಂತ್ರಾಲಯ ಪಡೆಯುವಲ್ಲಿ ಯಶಸ್ವಿಯಾದರು. ಅದರ ಅಂಗವಾಗಿ ಶ್ರೀರಾಘವೇಂಧ್ರಸ್ವಾಮಿಗಳು ಕೆಂಚನಗುಡ್ಡದಲ್ಲಿ ಶ್ರೀ ವಸುಧೇಂದ್ರ ಮಠವನ್ನು ಪ್ರತಿ ಮಂತ್ರಾಲಯದಂತೆ ರೂಪಿಸಲು ಅನುಗ್ರಹಿಸಿದ್ದಾರೆ ಎಂದರು.

ಉಗ್ರ ತಪಸ್ವಿಗಳು, ಮಹಿಮಾನ್ವಿತರು, ಸರ್ಪ ರೂಪದಲ್ಲಿ ದರ್ಶನ ನೀಡುತ್ತಿದ್ದ ವಸುಧೇಂದ್ರರು ಭಕ್ತರನ್ನು ಅನುಗ್ರಹಿಸುವಂತೆ ಅಂದಿನ ಪೀಠಾಧಿಪತಿಗಳಾಗಿದ್ದ ಸುಜೀಂಧ್ರ ತೀರ್ಥರು ಶಾಂತರೂಪ ತಾಳುವಂತೆ ಪ್ರಾರ್ಥಿಸಿ ಮೂಲರಾಮನ ವಿಗ್ರಹವನ್ನು ಬೃಂದಾವನದಲ್ಲಿ ಇಟ್ಟು ಪೂಜಿಸಿ ನಿತ್ಯ ಪೂಜೆಗೆ ಅನುಕೂಲ ಕಲ್ಪಿಸಿದರು ಎಂದು ತಿಳಿಸಿದರು.

ಭ‌ಕ್ತರ ಅನುಕೂಲಕ್ಕಾಗಿ ಕೆಂಚನಗುಡ್ಡದ ಶ್ರೀ ವಸುಧೇಂದ್ರ ತೀರ್ಥರ ಬೃಂದಾವನ ಸನ್ನಿಧಾನದಲ್ಲಿ ನಿತ್ಯ ಪೂಜೆಗೆ ಭಕ್ತರಿಗೆ ಅನುಕೂಲ, ನಿತ್ಯ ಭಕ್ತರಿಗೆ ರಾಯರ ಪ್ರಸಾದ ದೊರಕುವಂತೆ ನಿತ್ಯ ಅನ್ನದಾಸೋಹಕ್ಕೆ ಸಂಕಲ್ಪ ಮಾಡಲಾಗಿದ್ದು, ಭಕ್ತರು ತುಂಗಭದ್ರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಅಗತ್ಯವಾದ ಸುರಕ್ಷತೆ ದೃಷ್ಟಿಯಿಂದ ನದಿಯಲ್ಲಿ ಬ್ಯಾರಿಕೇಡ್‌ ಹಾಕಿ ವ್ಯವಸ್ಥೆ ಮಾಡಲಾಗುವುದು. ಸುತ್ತಮುತ್ತಲಿನ ಭಕ್ತರು ಸನ್ನಿಧಾನಕ್ಕೆ ಆಗಮಿಸಿ ಗುರುಗಳಿಗೆ ಸೇವೆ ಸಲ್ಲಿಸಿ ಅನುಗ್ರಹ ಹೊಂದುವಂತೆ ತಿಳಿಸಿದರು.

Advertisement

ಇದೇ ಸಂದರ್ಭದಲ್ಲಿ ಶ್ರೀಗಳು ನೂತನ ವರ್ಷದ ಕ್ಯಾಲೆಂಡರ್‌ ಬಿಡುಗಡೆಗೊಳಿಸಿದರು. ಭಕ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next