ಮೂರ್‍ನಾಲ್ಕು- ನಾಲ್ಕೈದು ಅಲ್ಲ, ಸತತ ಒಂಬತ್ತು ಸಲ ರಾಜ್ಯ ವಿಧಾನಸಭೆಗೆ ಗೆದ್ದವರು ಪ್ರಸ್ತುತ ರಾಜ್ಯಸಭೆ ವಿಪಕ್ಷ ನಾಯಕರಾಗಿರುವ ಡಾ|ಮಲ್ಲಿಕಾರ್ಜುನ ಖರ್ಗೆ. ಅವಿಭಜಿತ ಕಲಬುರಗಿ ಜಿಲ್ಲೆಯ ಗುರುಮಿಠಕಲ್ ಮೀಸಲು ವಿಧಾನಸಭೆ ಕ್ಷೇತ್ರದಿಂದ ಡಾ|ಮಲ್ಲಿಕಾರ್ಜುನ ಖರ್ಗೆ 1972ರಿಂದ 2004ರವರೆಗೆ ಸತತವಾಗಿ ಎಂಟು ಸಲ ಗೆದ್ದಿದ್ದರು. 2008ರಲ್ಲಿ ಗುರುಮಿಠಕಲ್ ಸಾಮಾನ್ಯ ಕ್ಷೇತ್ರವಾದ ಅನಂತರ ಡಾ|ಮಲ್ಲಿಕಾರ್ಜುನ ಖರ್ಗೆ 2008ರಲ್ಲಿಯೇ ಜಿಲ್ಲೆಯ ಚಿತ್ತಾಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಸತತ ಒಂಬತ್ತನೇ ಸಲ ವಿಧಾನಸಭೆ ಪ್ರವೇಶಿಸಿದರು.
ಸತತ ಒಂಬತ್ತು ಸಲ ಕಾಂಗ್ರೆಸ್ ಪಕ್ಷದಿಂದಲೇ ಗೆದ್ದಿಲ್ಲದೇ ಹಲವು ಖಾತೆಗಳ ಸಚಿವರಾಗಿದ್ದು ಮಗದೊಂದು ದಾಖಲೆಯೇ ಸರಿ. ಖರ್ಗೆ ಅವರು ಶಿಕ್ಷಣ, ಕಂದಾಯ, ಸಹಕಾರ, ಕೈಗಾರಿಕೆ, ಗೃಹ, ಸಣ್ಣ ನೀರಾವರಿ, ಜಲ ಸಂಪನ್ಮೂಲ, ಸಾರಿಗೆ ಸಹಿತ ಇತರ ಖಾತೆಗಳನ್ನು ನಿಭಾಯಿಸಿದ್ದಲ್ಲದೇ ಕೇಂದ್ರದಲ್ಲೂ ಕಾರ್ಮಿಕ ಹಾಗೂ ರೈಲ್ವೇ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ರಾಜ್ಯಸಭೆ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಾರೆ ಒಂಬತ್ತು ಸಲ ವಿಧಾನಸಭೆ, ಎರಡು ಸಲ ಲೋಕಸಭೆ ಪ್ರವೇಶಿಸಿದ್ದಾರೆ. ಅಲ್ಲದೇ ವಿಧಾನಸಭೆ ವಿಪಕ್ಷ ನಾಯಕರಾಗಿ ಕೀರ್ತಿ ಗಳಿಸಿ, ದಾಖಲೆ ಮಾಡಿದ್ದಾರೆ.