ಚಂಡೀಗಢ : ವಿವಾದಾತ್ಮಕ ಸ್ವಘೋಷಿತ ದೇವಮಾನ, ಡೇರಾ ಸಚ್ಚಾ ಸೌಧಾ ಮುಖ್ಯಸ್ಥ, ಗುರ್ಮಿತ್ ರಾಮ್ ರಹೀಮ್ ಸಿಂಗ್‌ನ ನಿಕಟವರ್ತಿ, ಸಲಹೆಗಾರ, ದಿಲಾವಾರ್ ಸಿಂಗ್ ಇನ್ಸಾನ್ ನನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ಡೇರಾ ಮುಖ್ಯಸ್ಥನ ದತ್ತು ಪುತ್ರಿಯಾಗಿರುವ ಹನಿಪ್ರೀತ್ ಸಿಂಗ್ ಇನ್ನೂ ತಲೆಮರೆಸಿಕೊಂಡಿದ್ದು ಆಕೆಗಾಗಿ ಹರಿಯಾಣ ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಡೇರಾ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಅತ್ಯಾಚಾರ ಅಪರಾಧಕ್ಕಾಗಿ ಕೋರ್ಟಿನಿಂದ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಸಂದರ್ಭದಲ್ಲಿ 40 ಅಮಾಯಕರ ಬಲಿಗೆ ಕಾರಣವಾದ ಭೀಕರ ಹಿಂಸೆಯನ್ನು ಹುಟ್ಟು ಹಾಕುವಲ್ಲಿ ದಿಲಾವರ್ ಸಿಂಗ್ ಇನ್ಸಾನ್ ಅತ್ಯಂತ ಮುಖ್ಯ ಪಾತ್ರ ವಹಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಡೇರಾ ಸಚ್ಚಾ ಸೌಧ ಇದರ ವಕ್ತಾರನಾಗಿರುವ ದಿಲಾವರ್‌ನನ್ನು ಪೊಲೀಸರು ಪಾಣಿಪತ್‌ನಲ್ಲಿ ನಿನ್ನೆ ಗುರುವಾರ ಬಂಧಿಸಿದರು. ಆತನನ್ನು ಇಂದು ಶುಕ್ರವಾರ ಪಂಚಕುಲ ಕೋರ್ಟಿನಲ್ಲಿ ಹಾಜರುಪಡಿಸಲಾಗುವುದು ಎಂದು ಹರಿಯಾಣ ಪೊಲೀಸ್ ಮಹಾ ನಿರ್ದೇಶಕ ಬಿ ಎಸ್ ಸಂಧು ತಿಳಿಸಿದ್ದಾರೆ.
ಕಳೆದ ಆಗಸ್ಟ್ 25ರಂದು ಗುರ್ಮಿತ್ ರಾಮ್ ರಹೀಮ್ ಸಿಂಗ್‌ಗೆ ವಿಶೇಷ ಸಿಬಿಐ ಕೋರ್ಟ್ ಇಪ್ಪತ್ತು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದ ಬೆನ್ನಿಗೇ ಆತನ ನಿಕಟವರ್ತಿ, ವಕ್ತಾರ ದಿಲಾವರ್ ಭೂಗತನಾಗಿದ್ದ.
ದಿಲಾವರ್ ಸಿಂಗ್ ಇನ್ಸಾನ್ ವಿರುದ್ಧ ಹರಿಯಾಣ ಪೊಲೀಸರು ಐಪಿಸಿ ಯಡಿ ದೇಶದ್ರೋಹದ ಕೇಸನ್ನು ದಾಖಲಿಸಿಕೊಂಡಿದ್ದಾರೆ.