Advertisement

ಆಟೋ,ಕಾರುಗಳನ್ನ ಜಖಂಗೊಳಿಸಿದ ಆರೋಪಿ ಕಾಲಿಗೆ ಗುಂಡೇಟು

09:46 AM Feb 17, 2020 | sudhir |

ಬೆಂಗಳೂರು: ಮಹಿಳೆಯೊಬ್ಬರ ಮನೆಗೆ ನುಗ್ಗಿ ದಾಂಧಲೆಗೆ ಮುಂದಾಗಿದಲ್ಲದೆ, ಅವರ ಮನೆ ಮುಂದಿದ್ದ ವಾಹನಗಳ ಜಖಂ ಮಾಡಿದ್ದ ಆರೋಪಿ ಶ್ರೀನಿವಾಸ ಅಲಿಯಾಸ್‌ ಸೀಗಡಿ ಸೀನಾನ(24) ಮೇಲೆ ಉತ್ತರ ವಿಭಾಗದ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

Advertisement

ಸೀನಾನ ಬಲಗಾಲಿಗೆ ಗುಂಡೇಟು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಹಲ್ಲೆಯಿಂದ ಗಾಯಗೊಂಡಿದ್ದ ಕಾನ್‌ಸ್ಟೆಬಲ್‌ ವೀರಭದ್ರ ಬಲಗೈಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

ಆರೋಪಿ ತನ್ನ ಸಹಚರರ ಜತೆ ಸೇರಿಕೊಂಡು ರಾಜಗೋಪಾಲನಗರದಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ದಾಂಧಲೆಗೆ ಮಂದಾಗಿದ್ದ. ಮನೆಯಲ್ಲಿ ಯಾರು ಇಲ್ಲದ ಕಾರಣ ಆಕ್ರೋಶಗೊಂಡು ಮನೆ ಮುಂದೆ ನಿಂತಿದ್ದ 4 ಕಾರು, 11 ಆಟೋಗಳನ್ನು ಜಖಂ ಮಾಡಿ ಪ್ರಾಬಲ್ಯ ಸಾಧಿಸಲು ಮುಂದಾಗಿದ್ದರು. ಈ ಸಂಬಂಧ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇತ್ತೀಚೆಗೆ ಸೀನಾನ ಸಹಚರರಾದ ಕಿರಣ್‌ ಮತ್ತು ಮನೋಜ್‌ ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಇವರ ಮಾಹಿತಿ ಮೇರೆಗೆ ಸೀನಾ ನಡೆಸಿದ ಕೃತ್ಯ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಸೀನಾನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಈತನ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ರೌಡಿಪಟ್ಟಿ ತೆರೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಯ ಬಲಗಾಲಿಗೆ ಗುಂಡೇಟು
ಶ್ರೀನಿವಾಸ್‌ ಅಲಿಯಾಸ್‌ ಸೀನಾ ಜಾಲಹಳ್ಳಿಯ ಹಳೇ ಬಸ್‌ ನಿಲ್ದಾಣದ ಬಳಿ ಅಪಾರ್ಟ್‌ಮೆಂಟ್‌ ಸಮೀಪ ಇರುವ ಖಾಲಿ ಜಾಗದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಸಿಕ್ಕಿತ್ತು. ಕೂಡಲೇ ರಾಜಗೋಪಾಲನಗರ ಠಾಣೆ ಇನ್‌ಸ್ಪೆಕ್ಟರ್‌ ದಿನೇಶ್‌ ಪಾಟೀಲ್‌ ತಮ್ಮ ತಂಡದ ಜತೆ ಆರೋಪಿಯ ಬಂಧನಕ್ಕೆ ತೆರಳಿದ್ದರು. ಪೊಲೀಸರನ್ನು ಕಂಡು ಪರಾರಿಯಾಗಲು ಮುಂದಾಗಿದ್ದಾನೆ. ಆಗ ಕಾನ್‌ಸ್ಟೆಬಲ್‌ ವೀರಭದ್ರ ಆತನನ್ನು ಹಿಡಿಯಲು ಹೋದಾಗ, ತನ್ನ ಬಳಿಯಿದ್ದ ಡ್ರ್ಯಾಗರ್‌ನಿಂದ ಅವರ ಬಲಗೈ ಗಾಯಗೊಳಿಸಿದ್ದಾನೆ. ಆಗ ಪಿಐ ದಿನೇಶ್‌ ಒಂದು ಸುತ್ತ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಆತನ ಬಲಗಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮಹಿಳೆಗಾಗಿ ದಾಂಧಲೆ
ರಾಜಗೋಪಾಲನಗರದಲ್ಲಿ ಆಟೋ ಚಾಲಕ ರಂಗನಾಥ್‌, ಪತ್ನಿ ಜತೆ ವಾಸವಾಗಿದ್ದರು. ಈ ಮಧ್ಯೆ ಪೋಷಕರನ್ನು ಕಳೆದುಕೊಂಡಿದ್ದ ಕಮಲಾನಗರ ನಿವಾಸಿ ಕಿರಣ್‌ ಎಂಬ ಯುವಕನನ್ನು ಒಂದೂವರೆ ವರ್ಷದಿಂದ ದಂಪತಿ ಸಾಕಿಕೊಂಡಿದ್ದರು. ರಂಗನಾಥ್‌ ಪತ್ನಿಯ ಮೊಬೈಲ್‌ ನಂಬರ್‌ ಅನ್ನು ಸಂಗ್ರಹಿಸಿದ್ದ ಹರೀಶ್‌ ಎಂಬಾತ ಸೀನಾನಿಗೆ ಕೊಟ್ಟಿದ್ದ. ನಂತರ ಸೀನಾ, ಮನೋಜ್‌, ಹರೀಶ್‌ ಹಾಗೂ ಇತರೆ ಎಂಟು ಮಂದಿ ಆರೋಪಿಗಳು ಮಹಿಳೆಗೆ ಪದೇ ಪದೇ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಕಿರಣ್‌ ಮತ್ತು ಆಕೆಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಇದೇ ವಿಚಾರಕ್ಕೆ ರಂಗನಾಥ್‌ ದಂಪತಿ ನಡುವೆ ವಾಗ್ವಾದ ನಡೆದಿದ್ದು, ರಂಗನಾಥ್‌ ಪತ್ನಿ ಮೇಲೆ ಹಲ್ಲೆ ನಡೆಸಿ ವಿಚ್ಛೇದನ ಕೊಡುವುದಾಗಿ ಹೇಳಿ ಮನೆ ಬಿಟ್ಟು ಹೋಗಿದ್ದರು. ಈ ವಿಚಾರ ತಿಳಿದ ಕಿರಣ್‌, ಆರೋಪಿಗಳಿಗೆ ಕರೆ ಮಾಡಿ ಮತ್ತೂಮ್ಮೆ ಈ ರೀತಿ ಮಾಡಿದರೆ ಪರಿಣಾಮ ಸರಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ. ಅಲ್ಲದೆ, ಮನೆ ಬಳಿ ಬಂದು ಮಾತನಾಡುವಂತೆ ತಾಕೀತು ಮಾಡಿದ್ದ.

Advertisement

ಅದರಿಂದ ಆಕ್ರೋಶಗೊಂಡ ಆರೋಪಿಗಳು ಫೆ.4ರಂದು ರಾತ್ರಿ ಮದ್ಯದ ಅಮಲಿನಲ್ಲಿ ಆಟೋ ಮತ್ತು ದ್ವಿಚಕ್ರ ವಾಹನಗಳಲ್ಲಿ ರಂಗನಾಥ್‌ ಮನೆ ಬಳಿ ಬಂದಿದ್ದರು. ಅಷ್ಟರಲ್ಲಿ ಆಕೆ ಮನೆ ಬೀಗ ಹಾಕಿಕೊಂಡು ಹೋಗಿದ್ದರು. ಅದರಿಂದ ಆಕ್ರೋಶಗೊಂಡ ಆರೋಪಿಗಳು ಪ್ರಬಾಲ್ಯ ಸಾಧಿಸಲು ರಂಗನಾಥ್‌ ಮನೆ ಬಾಗಿಲು ಮುರಿಯಲು ಯತ್ನಿಸಿದ್ದಾರೆ. ಸಾಧ್ಯವಾಗದಿದ್ದಾಗ ಅವರ ಮನೆ ಬಳಿ ನಿಂತಿದ್ದ ಕಾರು, ಆಟೋಗಳನ್ನು ಧ್ವಂಸಗೊಳಿಸಿ ಸಂಪೂರ್ಣವಾಗಿ ಹಾನಿಗೊಳಿಸಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next