ಗುಂಡ್ಲುಪೇಟೆ(ಚಾಮರಾಜನಗರ): ಜನರ ಮೇಲೆ ದಾಳಿಗೆ ಮುಂದಾಗುತ್ತಿದ್ದ ಹಾಗೂ ರೈತರ ಜಮೀನುಗಳಲ್ಲಿ ಪ್ರತಿದಿನ ದಾಳಿ ನಡೆಸಿ ಫಸಲು ಆಸ್ತಿ-ಪಾಸ್ತಿ ನಷ್ಟ ಉಂಟು ಮಾಡುತ್ತಿದ್ದ ರೇಡಿಯೋ ಕಾಲರ್ ಅಳವಡಿಸಿದ್ದ ಕಾಡಾನೆಯನ್ನು ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ ಕಡೆಕೋಟಿ ಪ್ರದೇಶದಲ್ಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ.
ಕಾಡಾನೆ ಸೆರೆ ಹಿಡಿದು ಸ್ಥಳಾಂತರಿಸುವಂತೆ ರೈತರು ಮಾಡಿಕೊಂಡ ಮನವಿಯ ಹಿನ್ನೆಲೆಯಲ್ಲಿ 2023 ಡಿ.21 ರಂದು ಮೇಲಾಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಡಿ.30 ರಂದು ಸದರಿ ಕಾಡಾನೆ ಸೆರೆಗೆ ಅನುಮತಿ ಪಡೆಯಲಾಗಿತ್ತು. ಆನೆಯ ಚಲನ-ವಲನ ಪರಿಶೀಲಿಸಿ ಜ.8 ರಂದು ಪತ್ತೆ ಹಚ್ಚುವ ಕಾರ್ಯ ಚುರುಕುಗೊಳಿಸಲಾಗಿತ್ತು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ, ಗಣೇಶ ಮತ್ತು ಭೀಮ ಆನೆಗಳನ್ನು ನಿಯೋಜನೆ ಮಾಡಿಕೊಂಡು ನುರಿತ ಪಶು ವೈಧ್ಯಾಧಿಕಾರಿಗಳಾದ ಡಾ.ಮಿರ್ಜಾವಾಸಿಂ, ಡಾ.ರಮೇಶ್ ಹಾಗೂ ಡಾ. ಮುಜೀಬ್ ರೆಹಮಾನ್ ಹಾಗೂ ಸಹಾಯಕರನ್ನು ಬಳಸಿಕೊಂಡು ಕಾರ್ಯಚರಣೆ ಕೈಗೊಳ್ಳಲಾಗಿತ್ತು. ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸತತ ಪರಿಶ್ರಮದ ಫಲವಾಗಿ ಕಾಡಾನೆಯನ್ನು ಅರವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು, ಕರ್ನಾಟಕ, ಅರಣ್ಯ ಭವನ, ಮಲ್ಲೇಶ್ವರಂ ಬೆಂಗಳೂರು ಅವರಿಗೆ ಮಾಹಿತಿ ನೀಡಿ, ಅವರ ಆದೇಶದಂತೆ ಸೆರೆ ಸಿಕ್ಕ ರೇಡಿಯೋ ಕಾಲರ್ ಅಳವಡಿಸಿರುವ ಪುಂಡಾನೆಯನ್ನು ಬಂಡೀಪುರ ವಿಭಾಗ ವ್ಯಾಪ್ತಿಯ ಐನೂರು ಮಾರಿಗುಡಿ ವಲಯದ ರಾಂಪುರ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.
ಹುಲಿ ಯೋಜನೆ ಕ್ಷೇತ್ರ ನಿರ್ದೇಶಕರಾದ ಡಾ.ರಮೇಶ್‍ಕುಮಾರ್ ಮಾರ್ಗದರ್ಶನ, ಬಂಡೀಪುರ, ಹೆಡಿಯಾಲ ಮತ್ತು ಹೆಡಿಯಾಲ ಉಪವಿಭಾಗಗಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮುಂದಾಳತ್ವ ವಹಿಸಿದ್ದರು.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳಿಗೆ 1-6ರ ಶಿಕ್ಷಣಕ್ಕೆ ತಾಲಿಬಾನ್ ಅನುಮತಿ