ಗುಂಡ್ಲುಪೇಟೆ (ಚಾಮರಾಜನಗರ): ಕಲುಷಿತ ನೀರು ಸೇವಿಸಿ ಮೂರು ಹಸುಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದಿದೆ.
ತಮಿಳುನಾಡು ಮೂಲದ ಮುತ್ತುಸ್ವಾಮಿ ಎಂಬವರಿಗೆ ಸೇರಿದ ಹಸುಗಳು ಇದಾಗಿದೆ.
ಮಾಲೀಕರು ತೆರಕಣಾಂಬಿ ಜಮೀನೊಂದರಲ್ಲಿ ಮೂರು ಹಸುಗಳನ್ನು ಸಾಕಾಣಿಕೆ ಮಾಡುತ್ತಿದ್ದರು ಎನ್ನಲಾಗಿದೆ. ತೆರಕಣಾಂಬಿ ಕಲ್ಯಾಣ ಮಂಟಪವೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಕಲುಷಿತ ಆಹಾರ ಮಿಶ್ರಣ ಮಾಡಿದ್ದ ನೀರನ್ನು ಸೇವಿಸಿದ ಹಸುಗಳು ಅಸ್ವಸ್ಥಗೊಂಡು ನಂತರ ಸಾವನ್ನಪ್ಪಿವೆ ಎಂದು ಪಶು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ಅರಿತ ಪಶು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾವನ್ನಪ್ಪಿರುವ ಕುರಿತು ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ.
ಈ ಸಂಬಂಧ ಪಶು ಇಲಾಖೆ ಸಹಾಯ ನಿರ್ದೇಶಕ ಮೋಹನ್ ಕುಮಾರ್ ಪ್ರತಿಕ್ರಿಯೆ ನೀಡಿ, ತೆರಕಣಾಂಬಿ ಕಲ್ಯಾಣ ಮಂಟಪದಲ್ಲಿ ಕಳೆದ ಸೋಮವಾರ ನಡೆದ ವಿವಾಹವೊಂದರಲ್ಲಿ ಉಳಿದಿದ್ದ ಪಾಯಸ, ಸಾಂಬಾರ್ ಸೇರಿದಂತೆ ಇನ್ನಿತರ ಹಲವು ಆಹಾರ ಪದಾರ್ಥಗಳನ್ನು ನೀರಿಗೆ ಸುರಿಯಲಾಗಿತ್ತು. ನಂತರ ಆ ನೀರು ಕಲುಷಿತಗೊಂಡಿದ್ದರೂ ಸಹ ಅದನ್ನು ಹಸುಗಳಿಗೆ ಮಾಲೀಕರು ಕುಡಿಸಿದ್ದಾರೆ.
ಈ ಕಾರಣದಿಂದ ಮೂರು ಹಸುಗಳು ಸಾವನ್ನಪ್ಪಿವೆ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಲಾಗಿದ್ದು, ಒಂದು ಹಸುವಿಗೆ ತಲಾ ಹತ್ತು ಸಾವಿರದಂತೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.