ಗುಂಡ್ಲುಪೇಟೆ/ಚಾಮರಾಜನಗರ: ನಮ್ಮ ವಿಚಾರಗಳನ್ನು ಹೇಳಲು ಅವಕಾಶವಿಲ್ಲ. ಸಂಸತ್ತಿನಲ್ಲಿ ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತದೆ, ವಿಧಾನಸಭೆಗಳಲ್ಲೂ ಮಾತನಾಡಲು ಅವಕಾಶವಿಲ್ಲ. ಆದ್ದರಿಂದ ಪಾದಯಾತ್ರೆ ಬಿಟ್ಟು ಬೇರೆ ದಾರಿ ನಮಗಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಗುಂಡ್ಲುಪೇಟೆಯ ಮೂಲಕ ಶುಕ್ರವಾರ ರಾಜ್ಯ ಪ್ರವೇಶಿಸಿದ ‘ಭಾರತ್ ಜೋಡೋ ಯಾತ್ರೆ’ಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಈ ಯಾತ್ರೆ ದೇಶದ ಧ್ವನಿ. ಇಲ್ಲಿ ನಾನೊಬ್ಬನೇ ಅಲ್ಲ. ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಅವರ ಕಷ್ಟಗಳನ್ನು ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಜಾತಿ, ಧರ್ಮ, ಭಾಷೆ ಎಂಬ ಭೇದ ಭಾವ ಇಲ್ಲ. ಸಂವಿಧಾನ ರಕ್ಷಣೆಯ ಉದ್ದೇಶವನ್ನು ಹೊಂದಿರುವ ಈ ಯಾತ್ರೆಯನ್ನು ತಡೆಯಲು ಯಾವ ವ್ಯಕ್ತಿ, ಶಕ್ತಿಗೂ ಸಾಧ್ಯವಿಲ್ಲ’ ಎಂದರು.
ದೇಶ ಎದುರಿಸುತ್ತಿರುವ ಸಮಸ್ಯೆಗಳು, ಇಲ್ಲಿ ನಡೆಯುತ್ತಿರುವ ಹಿಂಸೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡಲು ಇರುವ ಮಾರ್ಗಗಳನ್ನು ವಿರೋಧ ಪಕ್ಷದ ಪಾಲಿಗೆ ಮುಚ್ಚಲಾಗಿದೆ. ಪಾದಯಾತ್ರೆ ಬಿಟ್ಟು ಜನರ ಬಗ್ಗೆ ಮಾತನಾಡಲು ಬೇರೆ ದಾರಿಯೇ ಇಲ್ಲ ಎಂದರು.
‘ಬಿಜೆಪಿ, ಆರ್ ಎಸ್ಎಸ್ ವಿಚಾರಧಾರೆಗಳು ದೇಶದಲ್ಲಿ ದ್ವೇಷ, ಹಿಂಸೆಯನ್ನು ಸೃಷ್ಟಿಸುತ್ತಿವೆ. ದೇಶದ ಸಂವಿಧಾನ ಇಲ್ಲದಿದ್ದರೆ, ತ್ರಿವರ್ಣ ಧ್ಬಜಕ್ಕೆ ಬೆಲೆ ಇಲ್ಲ. ಸಂವಿಧಾನವನ್ಜು ರಕ್ಷಿಸಬೇಕಾಗಿದೆ. ನಮ ಯಾತ್ರೆಯಲ್ಲಿ ದ್ವೇಷ, ಹಿಂಸೆ ಇಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುತ್ತೇವೆ. ಯಾತ್ರೆಯಲ್ಲಿ ಯಾರಾದರೂ ಎಡವಿ ಬಿದ್ದರೆ, ಉಳಿದವರು ಅವರನ್ನು ಮೇಲಕ್ಕೆತ್ತಿ ಮುನ್ನಡೆಸುತ್ತಾರೆ. ಬಿದ್ದವನ ಜಾತಿ, ಧರ್ಮ, ಭಾಷೆ ಎಂದು ಯಾರೂ ಕೇಳುವುದಿಲ್ಲ’ ಎಂದು ರಾಹುಲ್ ಹೇಳಿದರು.
ಇದನ್ನೂ ಓದಿ:ಹಬ್ಬದ ಸಂದರ್ಭವೆಂದು ದರ ಏರಿಸಿದರೆ ಪರ್ಮಿಟ್ ರದ್ದು; ಸಾರಿಗೆ ಸಂಸ್ಥೆಗಳಿಗೆ ರಾಮುಲು ಎಚ್ಚರಿಕೆ
‘ನಾವಿಲ್ಲಿ ಉದ್ದುದ್ದ ಭಾಷಣ ಮಾಡುವುದಿಲ್ಲ. ಆರೇಳು ಗಂಟೆ ನಡೆಯುತ್ತೇವೆ. 15 ನಿಮಿಷ ಮಾತನಾಡುತ್ತೇವೆ. ಜನರ ಮಾತುಗಳನ್ನು ಕೇಳುತ್ತೇವೆ. ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ, ಸರ್ಕಾರಿ ಸಂಸ್ಥೆಗಳ ಖಾಸಗೀಕರರಣ ಬಗ್ಗೆ ಜನರು ಮಾತನಾಡುತ್ತಿದ್ದಾರೆ’ ಎಂದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಮಾತನಾಡಿ, ‘ರಾಹುಲ್ ಗಾಂಧಿ ಅವರು ಅಧಿಕಾರಕ್ಕಾಗಿ ಈ ಯಾತ್ರೆ ಹಮ್ಮಿಕೊಂಡಿಲ್ಲ. ದೇಶದ ಸಂಕಷ್ಟಗಳಿಗೆ ಮುಕ್ತಿ ನೀಡುವುದು ಅವರ ಉದ್ದೇಶ. ದ್ವೇಷ, ಹಿಂಸೆ, ಜಾತಿ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಲಾಗಿದೆ. ಪ್ರೀತಿಯಿಂದ ದೇಶವನ್ನು ಜೋಡಿಸುವ ಆಶಯ ಅವರದು. 532 ಕಿ.ಮೀ ನಡೆಸಿದ್ದಾರೆ. ಇನ್ನೂ 3000 ಕಿ.ಮೀ ನಡೆಯುವುದಿದೆ. ಈ ಸಂಕಲ್ಪದಲ್ಲಿ ನಾವು ರಾಹುಲ್ ಜೊತೆಗಿರುತ್ತೇವೆ’ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಬಿಜೆಪಿಯವರು ಧರ್ಮ, ಕೋಮುವಾದ, ಜಾತಿ ಆಧಾರಿತ ರಾಜಕಾರಣ ಮಾಡುತ್ತಿದ್ದಾರೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಲ್ಲ. ‘ದೇಶವನ್ನು ಧರ್ಮ, ಜಾತಿ ಆಧಾರದಲ್ಲಿ ವಿಭಜಿಸಬೇಕು ಎಂಬುದು ಅವರ ಉದ್ದೇಶ. ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಪ್ರಜಾಪ್ರಭುತ್ವ, ದೇಶದ ಸಂವಿಧಾನ ರಕ್ಷಣೆಗಾಗಿ ನಾವು ಎಲ್ಲ ತ್ಯಾಗಗಳಿಗೂ ಸಿದ್ಧರಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರು ಮಾಡುತ್ತಿರುವ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು’ ಎಂದರು.
ರಾಜ್ಯ ಪ್ರವೇಶಿಸಿದ ಪಾದಯಾತ್ರೆಯ ಮೊದಲ ದಿನ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಚ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಧ್ರುವನಾರಾಯಣ, ಬಿ ಕೆ ಹರಿಪ್ರಸಾದ್, ಆರ್ ವಿ ದೇಶಪಾಂಡೆ, ಎಂಬಿ ಪಾಟೀಲ್ ಸೇರಿದಂತೆ ಹಲವಾರು ಪ್ರಮುಖ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.