ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಪಾರ್ವತಿ ಬೆಟ್ಟದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ನೂಕು ನುಗ್ಗಲು ಉಂಟಾದ ಕಾರಣ ರಥದ ಚಕ್ರ ಹರಿದು ಓರ್ವ ಯುವಕ ಮೃತ ಪಟ್ಟಿದ್ದು, ಮತ್ತಿಬ್ಬರು ಕಾಲು ಮುರಿತವಾಗಿರುವ ದುರ್ಘಟನೆ ಭಾನುವಾರ ನಡೆದಿದೆ.
ಕಂದೇಗಾಲ ಗ್ರಾಮದ ಸರ್ಪಭೂಷಣ್(27) ಮೃತ ಯುವಕ. ಕಂದೇಗಾಲದ ಸ್ವಾಮಿ(40) ಹಾಗೂ ಕೊಡಸೋಗೆ ಗ್ರಾಮದ ಕರಿನಾಯಕ(50) ಇಬ್ಬರ ಕಾಲು ಮುರಿದು ಹೋಗಿದೆ.
ಜಾತ್ರಾ ಮಹೋತ್ಸವದಲ್ಲಿ ಒಮ್ಮೆಲೆ ಅಧಿಕ ಮಂದಿ ತೇರು ಎಳೆದ ಕಾರಣ ರಥ ವೇಗವಾಗಿ ಮುಂದೆ ಚಲಿಸಿತು. ಈ ವೇಳೆ ನೂಕು ನುಗ್ಗಲು ಉಂಟಾಗಿ ತೇರಿನ ಕೆಳಗೆ ಮೂವರು ಸಿಲುಕಿ ಹಾಕಿಕೊಂಡಿದ್ದಾರೆ. ರಥವು ಸರ್ಪಭೂಷಣ್ ಎದೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಕಾಲಿನ ಮೇಲೆ ತೇರು ಹರಿಯಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಲಾಡ್ಜ್ ನಲ್ಲಿ ಗಲಾಟೆ: ಯುವಕ, ಇಬ್ಬರು ತೃತೀಯ ಲಿಂಗಿಗಳ ಸೆರೆ
ಮೂವರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸರ್ಪಭೂಷಣ್ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮತ್ತಿಬ್ಬರು ಗಾಯಾಳುಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.