ಗುಂಡ್ಲುಪೇಟೆ(ಚಾಮರಾಜನಗರ): ಕಳ್ಳಬೇಟೆಗೆ ತೆರಳಿದ್ದ ವ್ಯಕ್ತಿಯೋರ್ವ ಅರಣ್ಯ ಇಲಾಖೆ ಗುಂಡೇಟಿಗೆ ಸ್ಥಳದಲ್ಲೇ ಬಲಿಯಾಗಿರುವ ಘಟನೆ ಬಂಡೀಪುರ ಅಭಯಾರಣ್ಯದ ಮದ್ದೂರು ವಲಯ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಭೀಮನಬೀಡು ಗ್ರಾಮದ ಮನು(27) ಮೃತ ಯುವಕ.
ಸುಮಾರು 10 ಮಂದಿ ಬೇಟೆಗಾರರ ತಂಡ ಜಿಂಕೆ, ಕಡವೆ ಬೇಟೆಗೆ ಕಾಡಿನ ಒಳಗೆ ನುಗ್ಗಿದ್ದಾರೆ. 3-4 ಕಡವೆಗಳನ್ನು ಬೇಟೆಯಾಡಿ ಹೊರಗೆ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಳ್ಳ ಬೇಟೆಗಾರರನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಮುಂದಾಗಿದ್ದಾರೆ.
ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಕಳ್ಳ ಬೇಟೆಗಾರರು ನಾಡ ಬಂದೂಕಿನಿಂದ ದಾಳಿ ನಡೆಸಿದ್ದು, ಆತ್ಮರಕ್ಷಣೆಗಾಗಿ ಅಧಿಕಾರಿಗಳು ಪ್ರತಿ ದಾಳಿ ನಡೆಸಿ ಬೇಟೆಗಾರರ ಮೇಲೆ ಗುಂಡು ಹಾರಿಸಿದ್ದಾರೆ.
ದಾಳಿ ವೇಳೆ ಅರಣ್ಯಾಧಿಕಾರಿಗಳು ಹಾರಿಸಿದ ಗುಂಡು ಕಳ್ಳಬೇಟೆಗಾರ ಮನುವಿನ ಬೆನ್ನಿನ ಮೇಲೆ ಬಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಕ್ಷಣ ಉಳಿದ ಬೇಟೆಗಾರರು ಪರಾರಿಯಾಗಿದ್ದಾರೆ.
ಎಸ್ಪಿ, ತಹಸೀಲ್ದಾರ್ ಭೇಟಿ: ಅರಣ್ಯಾಧಿಕಾರಿ ಗುಂಡೇಟಿಗೆ ಕಳ್ಳ ಬೇಟೆಗಾರ ಬಲಿಯಾದ ಮಾಹಿತಿ ಅರಿತ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ, ತಹಶೀಲ್ದಾರ್ ಟಿ.ರಮೇಶ್ ಬಾಬು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಬೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕುಟುಂಸ್ಥರ ಆಕ್ರಂದನ: ಗುಂಡೇಟಿನಿಂದ ಕಳ್ಳ ಬೇಟೆಗಾರ ಮನು ಸಾವನ್ನಪಿದ ಹಿನ್ನಲೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಮೃತನ ತಂದೆ-ತಾಯಿ ಹಾಗೂ ಸಂಬಂಧಕರ ಆಕ್ರಂದನ ಮುಗಿಲು ಮುಟ್ಟಿತ್ತು.