ಗುಂಡ್ಲುಪೇಟೆ: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಿರೀಕೆರೆ ಏರಿ ರಸ್ತೆ ಸಂಪೂರ್ಣ ಕೆಸರುಮಯವಾಗಿ ಸಂಚಾರಕ್ಕೆ ತೊಂದರೆಯಾದ ಹಿನ್ನೆಲೆ ʼಹದಗೆಟ್ಟ ಹಿರೀಕೆರೆ ಏರಿ ರಸ್ತೆʼ ದುರಸ್ತಿಗೆ ಒತ್ತಾಯ ಎಂಬ ಶೀರ್ಷಿಕೆಯಡಿ ಅ.21ರಂದು ಉದಯವಾಣಿಯಲ್ಲಿ ಸುದ್ದಿ ಪ್ರಕಟವಾದ ಹಿನ್ನೆಲೆ ಜಿಪಂ ಎಇಇ ಸಂತೋಷ್ ಭೇಟಿ ನೀಡಿ ಕೆರೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರೊಂದಿಗೆ ಕೆರೆ ಏರಿ ವೀಕ್ಷಿಸಿದ ಜಿಪಂ ಎಇಇ ಸಂತೋಷ್ ಸಮಗ್ರ ಅಭಿವೃದ್ಧಿ ಯೋಜನೆಯಡಿ ಹಿರೀಕೆರೆ ಸೇರಿಸಲಾಗಿದ್ದು, ಕೆರೆ ಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ನಂತರ ಮಾತನಾಡಿದ ಅವರು, ಕೆರೆಯ ಆಸುಪಾಸಿನಲ್ಲಿ ಜಮೀನು ಹೊಂದಿರುವ ರೈತರು ಮಳೆ ಬಿದ್ದ ಸಂದರ್ಭದಲ್ಲಿ ತರಕಾರಿ ಸೇರಿದಂತೆ ಇನ್ನಿತರ ಸರಕುಗಳನ್ನು ನಿಗದಿಗಿಂತ ಅಧಿಕ ಪ್ರಮಾಣದಲ್ಲಿ ಭಾರಿ ವಾಹನಗಳಲ್ಲಿ ಹಾಕಿಕೊಂಡು ಸಂಚರಿಸುತ್ತಿರುವ ಕಾರಣ ಕೆರೆ ಏರಿ ಸಂಪೂರ್ಣವಾಗಿ ಹಳ್ಳ ಕೊಳ್ಳಗಳು ನಿರ್ಮಾಣವಾಗಿರುವುದರಿಂದ ಕೆಸರು ಗದ್ದೆಯಂತೆ ಮಾರ್ಪಾಡಾಗಿದೆ. ಏರಿ ರಸ್ತೆಯಲ್ಲಿ ವಾಹನ ಸಂಚಾರದಿಂದ ಕುಸಿತವಾಗಿರುವ ಹಿನ್ನೆಲೆ ಏರಿ ಬಿರುಕು ಬಿಡುವ ಹಂತಕ್ಕೆ ಬಂದಿದೆ. ಈ ಬಗ್ಗೆ ತಹಶೀಲ್ದಾರ್‌ಗೆ ಪತ್ರ ಬರೆದು ಕೆರೆ ಏರಿ ಮೇಲೆ ವಾಹನ ಸಂಚಾರ ನಿರ್ಬಂಧಿಸುವಂತೆ ಮನವಿ ಮಾಡಲಾಗಿದೆ. ಇನ್ನು ಕೆರೆ ಏರಿಯ ಕೆಳಗಿರುವ ಥೋರಸ್ತೆಯನ್ನು ಪಕ್ಕದ ಜಮೀನಿನವರು ಒತ್ತುವರಿ ಮಾಡಿ ಕೊಂಡಿದ್ದಾರೆ. ಈ ಕಾರಣದಿಂದ ರೈತರು ಏರಿ ಮೇಲೆ ಸಂಚಾರ ಮಾಡುತ್ತಿದ್ದಾರೆ.
ಈ ಬಗ್ಗೆಯೂ ಕೂಡ ಥೋ ರಸ್ತೆ ಹದ್ದುಬಸ್ತು ಗುರುತಿಸುವಂತೆ ಪತ್ರ ಬರೆಯಲಾಗಿದ್ದು, ಒತ್ತುವರಿ ಜಾಗ ತೆರವಾದ ಕೂಡಲೇ ಅಲ್ಲಿ ರಸ್ತೆ ನಿರ್ಮಿಸಿ ವಾಹನಗಳು ಆ ಮಾರ್ಗದಲ್ಲಿ ಸಂಚರಿಸುವಂತೆ ಮಾಡ ಲಾಗುವುದು ಎಂದು ತಿಳಿಸಿದರು. ರೈತ ಮುಖಂಡರಾದ ಹಂಗಳ ಮಾಧು, ದಿಲೀಪ್, ನಾಗೇಶ್, ನಂದೀಶ್, ಶಶಿ, ಮಾದೇಶ್, ತಮ್ಮಯ್ಯ, ಮಂಜುನಾಥ್ ಇತರರು ಇದ್ದರು.