ಬೆಂಗಳೂರು: ಉಪಮುಖ್ಯಮುಂತ್ರಿ ಡಾ.ಜಿ.ಪರಮೇಶ್ವರ್ ಅವರು ಸಾರ್ವಜನಿಕವಾಗಿ ಗನ್‌ಮ್ಯಾನ್‌ವೊಬ್ಬರಿಂದ ಶೂಗಳು ಮತ್ತು ಬಟ್ಟೆಗಳ ಕೊಳೆ ಒರೆಸಿಕೊಂಡು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿರುವ ಪರಮೇಶ್ವರ್ ಅವರು ಇಂದು ಮಂಗಳವಾರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ನಗರ ಪ್ರದಕ್ಷಿಣೆಗೆ ಆಗಮಿಸಿದ್ದರು.
ಹಲಸೂರು ಗುರುದ್ವಾರದ ಬಳಿಯಿರುವ ಮಳೆ ನೀರು ಕಾಲುವೆ ಬಳಿ ಆಗಮಿಸಿದ ವೇಳೆ ರಸ್ತೆಯಲ್ಲಿದ್ದ ಕೊಚ್ಚೆ ನೀರು ಡಿಸಿಎಂ ಅವರ ಶುಭ್ರವಾದ ಬಟ್ಟೆಗಳಿಗೆ ಹಾರಿದೆ. ಕೂಡಲೇ ಸ್ಥಳದಲ್ಲಿ ಕಾಂಗ್ರೆಸ್ ಬೆಂಬಲಗರೊಬ್ಬರು ಬಂದು ಅದನ್ನು ಒರೆಸಲು ಮುಂದಾಗಿದ್ದಾರೆ. ಆಗ ನೀನು ಬೇಡ ಎಂದು ಗನ್ ಮ್ಯಾನ್ ಬಳಿ ಒರೆಸಿಕೊಂಡಿದ್ದಾರೆ.
ಗನ್ ಮ್ಯಾನ್ ಮಾಧ್ಯಮಗಳು, ಶಾಸಕರು ಮತ್ತು ನೂರಾರು ಜನರ ಮುಂದೆ ಕರವಸ್ತ್ರ ಬಳಸಿ ನೀರಲ್ಲಿ ಅದ್ದಿ ಕೊಳೆ ಒರೆಸಿದ್ದಾನೆ.
ಡಿಸಿಎಂ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗಳು ಕೇಳಿ ಬಂದಿವೆ. ಅಂಧಾ ದರ್ಬಾರ್ ನಡೆ ಎಂದು ಮಾಧ್ಯಮಗಳು, ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಉತ್ತರಿಸಿದ ಪರಮೇಶ್ವರ್ ಅವರು ‘
‘ಇದೇನು ಇಂಟರ್ ನ್ಯಾಷನಲ್ ನ್ಯೂಸಾ” ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.