Advertisement
ಉತ್ತರ ಕನ್ನಡ ಭೌಗೋಳಿಕವಾಗಿ ದೊಡ್ಡ ಜಿಲ್ಲೆ. ಮನೆಗೊಂದು ಊರು, ಊರಿಗೊಂದು ಮನೆ. ಕಾಡಿನಲ್ಲಿ ಕೃಷಿ ಬದುಕು. ಇಂಥ ಮಲೆನಾಡಿನಲ್ಲಿ ಕಾಡು ಮೃಗಗಳ ಕಾಟ ಕೂಡ ಹೆಚ್ಚೇ. ಈ ಕಾರಣದಿಂದ ಸಿಂಗಲ್ ಹಾಗೂ ಡಬಲ್ ನಳಿಕೆ ಬಂದೂಕುಗಳನ್ನು ರೈತರಿಗೆ ನೀಡಲಾಗಿತ್ತು. ಅವರು ಅದನ್ನು ವನ್ಯ ಮೃಗಗಳನ್ನು ಹೆದರಿಸಲು, ಒಮ್ಮೆ ಕಾಟ ಜಾಸ್ತಿ ಮಾಡಿದರೆ ಗುಂಡು ಹೊಡೆದು ಓಡಿಸಲು ಬಳಸುತ್ತಿದ್ದರು. ಇದಕ್ಕೆ ಜಿಲ್ಲಾಡಳಿತ ಅನುಮತಿ ಕೂಡ ನೀಡಿತ್ತು. ಆಯಾ ಕಾಲದಲ್ಲಿ ಅದನ್ನು ಪುನಃ ನವೀಕರಣಗೊಳಿಸಬೇಕಾದುದು ಅಗತ್ಯವಾಗಿದೆ.
Related Articles
Advertisement
ಇನ್ನೊಂದೆಡೆ ವಿಧಾನ ಸಭೆ, ಲೋಕ ಸಭೆ ಚುನಾವಣೆ ಬಂದರೆ ನೀತಿ ಸಂಹಿತೆ ಆರಂಭದಿಂದ ಪೂರ್ಣ ಮುಗಿಯುವ ತನಕ ಪೊಲೀಸ್ ಠಾಣೆಗಳಲ್ಲಿ ಇಡಬೇಕಾಗುತ್ತದೆ. ರೈತರು ಮನೆಯಿಂದ ಬಸ್ ನಿಲ್ದಾಣಕ್ಕೆ ನಡೆದು ಬಂದು ಶಿರಸಿ, ಯಲ್ಲಾಪುರ, ಮುಂಡಗೋಡ, ಸಿದ್ದಾಪುರ ಪೇಟೆಗೆ ಹೋಗಿ ಠಾಣೆಯಲ್ಲಿಟ್ಟು ಬರಬೇಕು. ನೀತಿ ಸಂಹಿತೆ ಅವಧಿ ಮುಗಿದ ಬಳಿಕ ಮತ್ತೆ ಠಾಣೆಗೆ ಹೋಗಿ ಪರವಾನಗಿ ತೋರಿಸಿ ವಾಪಸ್ ತರಬೇಕು. ಬಂದೂಕು ಇದ್ದರೂ ಬೆಳೆ ರಕ್ಷಣೆ ಕಾಲ ಆದರೂ ಠಾಣೆಯಲ್ಲಿ ಇಡಬೇಕಾದ ಕಾಟ ತಪ್ಪಿಲ್ಲ ಎನ್ನುತ್ತಾರೆ ಬಳಕೆದಾರರು.
ಅರ್ಜಿ ಕೊಟ್ಟಾಗಿತ್ತು!: ಬಂದೂಕು ನವೀಕರಣ ಮೊದಲು ತಹಶೀಲ್ದಾರ್ ಹಂತದಲ್ಲೇ ಮಾಡಲಾಗುತ್ತಿತ್ತು. ಅದು ಜಿಲ್ಲಾಧಿಕಾರಿಗಳ ಹಂತಕ್ಕೆ ಹೋಗಿದ್ದರಿಂದ ಈಗ ಸಮಸ್ಯೆ ಆಗಿದೆ. ಅನೇಕ ರೈತರು ಆರೇಳು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದರೂ ಇನ್ನೂ ನವೀಕರಣಗೊಂಡಿಲ್ಲ ಎಂಬ ಆರೋಪವಿದೆ. ನನ್ನದು ಡಿಸೆಂಬರ್‌ಗೆ ಅರ್ಜಿ ಕೊಟ್ಟು ನವೀಕರಣಕ್ಕೆ ಕೋರಿದ್ದರೂ ಇನ್ನೂ ಆಗಿಲ್ಲ ಎನ್ನುತ್ತಾರೆ ರೈತ ರಾಮಚಂದ್ರ.
ಡಿಸಿ ಕಚೇರಿಯಲ್ಲಿ ಇನ್ನೂ ಸಾವಿರಾರು ಆರ್ಜಿಗಳು ನವೀಕರಣಗೊಳ್ಳಬೇಕು ಎಂಬುದು ಅಧಿಕಾರಿಯೊಬ್ಬರ ಅಭಿಮತ. ಅದೂ ಆಗುತ್ತಿದೆ, ವಿಳಂಬ ಆಗಿದ್ದು ಹೌದು ಎಂದೂ ಹೇಳುತ್ತಾರೆ.
ಶಿರಸಿ ಉಪ ವಿಭಾಗದ ಪೊಲೀಸ್ ಠಾಣೆಯಲ್ಲೇ ಸಾವಿರದಷ್ಟು ರೈತರ ಬಂದೂಕುಗಳು ವಾಪಸ್ ಬಳಕೆದಾರರನ್ನು ತಲುಪಿಲ್ಲ. ಕಾರಣ ಇನ್ನೂ ಅವರಿಗೆ ಪರವಾನಗಿ ಬಂದಿಲ್ಲ ಎಂದೇ ಅರ್ಥ. ಬಂದೂಕು ಒಯ್ದಿಲ್ಲ ಎಂಬುದೂ ಪೊಲೀಸರ ತಲೆನೋವು.
•ರಾಘವೇಂದ್ರ ಬೆಟ್ಟಕೊಪ್ಪ