ಹೊಸದಿಲ್ಲಿ: ಜಪಾನಿನ ನಿಗಾಟಾದಲ್ಲಿ ನಡೆದ ವರ್ಲ್ಡ್ ಆ್ಯತ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಕೂಟದಲ್ಲಿ ಭಾರತದ ದೂರ ಓಟಗಾರ ಗುಲ್ವೀರ್ ಸಿಂಗ್ ನೂತನ ದಾಖಲೆ ಸ್ಥಾಪಿಸಿದ್ದಾರೆ.
5,000 ಮೀ. ರೇಸ್ ಸ್ಪರ್ಧೆಯನ್ನು ಅವರು 13 ನಿಮಿಷ, 11.82 ಸೆಕೆಂಡ್‌ಗಳಲ್ಲಿ ಪೂರೈಸಿದರು. ಈ ಸಂದರ್ಭದಲ್ಲಿ ಅವರು ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದರು.
ಕಳೆದ ಜೂನ್‌ನಲ್ಲಿ ನಡೆದ ಪೋರ್ಟ್‌ಲ್ಯಾಂಡ್ ಟ್ರ್ಯಾಕ್ ಫೆಸ್ಟಿವೆಲ್ ಟೂರ್ನಿಯಲ್ಲಿ ಗುಲ್ವಿàರ್ 13 ನಿಮಿಷ, 18.92 ಸೆಕೆಂಡ್‌ಗಳ ದಾಖಲೆ ಸ್ಥಾಪಿಸಿದ್ದರು. ಈ ಸಂದರ್ಭ ದಲ್ಲಿ ಅವಿನಾಶ್ ಸಾಬಲೆ ಅವರ ರಾಷ್ಟ್ರೀಯ ದಾಖಲೆ ಮುರಿಯಲ್ಪಟ್ಟಿತ್ತು (13:19.30).
ಕಳೆದ ಮಾರ್ಚ್ ತಿಂಗಳಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ಪುರುಷರ 10 ಸಾವಿರ ಮೀ. ಓಟದಲ್ಲೂ ಗುಲ್ವಿàರ್ ಸಿಂಗ್ ಭಾರತೀಯ ದಾಖಲೆ ಸ್ಥಾಪಿಸಿದ್ದರು (27.41:81). ಇದರೊಂದಿಗೆ 2008ರಲ್ಲಿ ಸುರೇಂದರ್ ಸಿಂಗ್ ಸ್ಥಾಪಿಸಿದ ದಾಖಲೆ ಮುರಿಯಲ್ಪಟ್ಟಿತ್ತು (28.02.89). ಈ ಸಾಧನೆಯ ಹೊರತಾಗಿಯೂ ಗುಲ್ವೀರ್ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಸಂಪಾದಿಸುವಲ್ಲಿ ವಿಫಲರಾಗಿದ್ದರು. ಇಲ್ಲಿನ ಆಯ್ಕೆ ಮಾನದಂಡ 27 ನಿಮಿಷವಾಗಿತ್ತು.